ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣದಲ್ಲಿ ಶಾಮಿಲಾಗಿದ್ದ ನರ್ಸ್ ಬಂಧನ
ಬೆಂಗಳೂರು ಸೇರಿ ಮೂರು ಜಿಲ್ಲೆಗಳಲ್ಲಿ ನಡೆದಿದ್ದ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದೆ. ಈ ಪ್ರಕರಣವನ್ನು ಬೆಂಗಳೂರು ಪೊಲೀಸರು ಬೇದಿಸಿದ್ದಾರೆ. ಇದೀಗ ಪ್ರಕರಣ ಸಂಬಂಧ ಬೈಯ್ಯಪ್ಪಹಳ್ಳಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ನರ್ಸ್ ಉಷಾರಾಣಿ ಬಂಧಿತ ಆರೋಪಿ. ಈ ಮೂಲಕ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಬಂಧಿತ ಉಷಾರಾಣಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಡಾ.ಚಂದನ್ ಬಲ್ಲಾಳ್ನ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಳು. ಪ್ರಕರಣ ಬೆಳಕಿಗೆ ಬಂದ ಬಳಿಕ ನರ್ಸ್ ಉಷಾರಾಣಿ ಕೆಲಸ ಬಿಟ್ಟಿದ್ದಳು. ಬಳಿಕ ಮೈಸೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕೆಲಸಕ್ಕೆ ಸೇರಿದ್ದಳು.
ನರ್ಸ್ ಉಷಾರಾಣಿ ಪ್ರಕರಣದ ಮತ್ತೊಬ್ಬ ಆರೋಪಿ ಬ್ರೋಕರ್ ಪುಟ್ಟರಾಜು ಸಂಬಂಧಿ ಆಗಿದ್ದಾಳೆ. ಬ್ರೋಕರ್ ಪುಟ್ಟರಾಜು ಅಣತಿ ಮೇರೆಗೆ ಉಷಾರಾಣಿ ಗರ್ಭಪಾತ ಮಾಡುತ್ತಿದ್ದಳು. ಗರ್ಭಪಾತಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಳು. ಬೈಯ್ಯಪ್ಪಹಳ್ಳಿ ಪೊಲೀಸರು ಬ್ರೋಕರ್ ಪುಟ್ಟರಾಜು ಅನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಎಲ್ಲ ವಿಚಾರಗಳು ಬಯಲಾಗಿವೆ. ಸದ್ಯ ಬ್ರೋಕರ್ ಪುಟ್ಟರಾಜು ಜಾಮೀನು ಪಡೆದಿದ್ದು, ಸಂಬಂಧಿ ಉಷಾರಾಣಿಯನ್ನು ಬಂಧಿಸಲಾಗಿದೆ.