ಬ್ರಹ್ಮ ತನ್ನ ಮಗಳಾದ ಸರಸ್ವತಿಯನ್ನೇ ಮದುವೆ ಆಗಿದ್ದು ಯಾಕೆ…?
ಬ್ರಹ್ಮದೇವ ತನ್ನ ಮಗಳನ್ನೇ ಮದುವೆಯಾಗಿದ್ದು ಯಾಕೆ? ಬ್ರಹ್ಮನಿಗಿದ್ದ ಐದು ತಲೆಯಲ್ಲಿ ಒಂದು ತಲೆಯನ್ನು ಕತ್ತರಿಸಿದ್ದು ಯಾರು? ಬ್ರಹ್ಮನನ್ನು ಯಾರು ಯಾಕೆ ಪೂಜೆ ಮಾಡುವುದಿಲ್ಲ ಗೊತ್ತಾ..?
ಸರಸ್ವತಿಯನ್ನ ಬ್ರಹ್ಮನ ಪತ್ನಿ ಎಂದು ಕರೆಯಲಾಗುತ್ತದೆ. ಅದೇ ಸರಸ್ವತಿ ಬ್ರಹ್ಮನ ಪುತ್ರಿ ಕೂಡಾ ಹೌದು. ಸೃಷ್ಟಿ ಕರ್ತ ಬ್ರಹ್ಮ ತನ್ನ ಮಗಳನ್ನೇ ಮದುವೆಯಾದರು. ಈ ಬಗ್ಗೆ ಸರಸ್ವತಿ ಪುರಾಣದಲ್ಲಿ ಹಾಗೂ ಮತ್ಸ್ಯ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಎಲ್ಲರಿಗೂ ತಿಳಿದಿರುವಂತೆ ಈ ಭೂಮಂಡಲವನ್ನು ಸೃಷ್ಟಿಸಿದ್ದು ಬ್ರಹ್ಮ. ಆಗ ಸೃಷ್ಟಿಯಲ್ಲಿ ಯಾರು ಇರಲಿಲ್ಲ. ಆದ್ದರಿಂದ ಬ್ರಹ್ಮ ಸರಸ್ವತಿಯನ್ನು ಸೃಷ್ಟಿಸುತ್ತಾನೆ. ಆದರೆ ಸರಸ್ವತಿಗೆ ತಾಯಿ ಅಂತ ಯಾರೂ ಇಲ್ಲದಿದ್ದರಿಂದ ಆಕೆಯನ್ನು ಬ್ರಹ್ಮನ ಪುತ್ರಿ ಎಂದು ಕರೆಯಲಾಗುತ್ತದೆ.
ಬ್ರಹ್ಮನು ತಾನೇ ಸೃಷ್ಟಿಸಿದಂತಹ ಸರಸ್ವತಿಯ ಸೌಂದರ್ಯಕ್ಕೆ ಮಾರು ಹೋಗುತ್ತಾನೆ. ಅಲ್ಲದೆ ಬ್ರಹ್ಮನು ತನ್ನ ಮನಸ್ಸಿನಲ್ಲಿ ಸರಸ್ವತಿಯನ್ನು ವಿವಾಹವಾಗಬೇಕು ಎಂದು ಬಯಸುತ್ತಾನೆ. ಈ ವಿಚಾರವನ್ನು ತಿಳಿದಂತಹ ಸರಸ್ವತಿ ನಾಲ್ಕು ದಿಕ್ಕುಗಳಿಗೂ ಓಡಿಹೋಗಿ ಬ್ರಹ್ಮದೇವನಿಂದ ತಪ್ಪಿಸಿಕೊಳ್ಳಲು ತುಂಬಾ ಪ್ರಯತ್ನವನ್ನು ಪಡುತ್ತಾಳೆ. ಆದರೆ ಸರಸ್ವತಿ ಬ್ರಹ್ಮನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಕೊನೆಗೆ ಸರಸ್ವತಿಗೆ ಬೇರೆ ಯಾವ ದಾರಿಯೂ ಇಲ್ಲದೆ ಬ್ರಹ್ಮನನ್ನು ವಿವಾಹವಾಗಬೇಕಾಗುತ್ತದೆ. ನಂತರ ಇವರಿಬ್ಬರೂ ಭೂಮಿಗೆ ಬಂದು ಅರಣ್ಯ ಪ್ರದೇಶ ಒಂದರಲ್ಲಿ ಸುಮಾರು 100 ವರ್ಷಗಳ ಕಾಲ ಗಂಡ ಹೆಂಡತಿಯಾಗಿ ಜೀವನ ನಡೆಸುತ್ತಾರೆ. ಈ ವೇಳೆ ಅವರಿಗೆ ಒಂದು ಮಗು ಸಹ ಜನಿಸುತ್ತದೆ. ಆ ಮಗುವೆ ಮನು.
ಭೂಮಿಗೆ ಕಾಲಿಟ್ಟ ಮೊದಲ ಮನುಷ್ಯ ಮನು ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಬ್ರಹ್ಮನು ತನ್ನ ಮಗಳನ್ನೇ ಮೋಹಿಸಿ ಆಕೆಯನ್ನೇ ಮದುವೆಯಾಗಿ ಸಂಸಾರ ಮಾಡಿದ್ದನ್ನ ತಿಳಿದ ಉಳಿದ ದೇವತೆಗಳೆಲ್ಲರೂ ಕೋಪಗೊಳ್ಳುತ್ತಾರೆ. ಇದನ್ನು ಘೋರ ಪಾಪ ಎಂದು ಭಾವಿಸಿದ ಎಲ್ಲಾ ದೇವತೆಗಳು ಎಲ್ಲರೂ ಶಿವ ಬಳಿ ಹೋಗಿ ಬ್ರಹ್ಮದೇವ ಮಾಡಿದ ಕೆಲಸ ಸರಿಯಿಲ್ಲ.
ಅವನ ತಪ್ಪಿಗೆ ಶಿಕ್ಷೆ ಕೊಡಲೇಬೇಕೆಂದು ಎಲ್ಲಾ ದೇವತೆಗಳು ಹೇಳುತ್ತಾರೆ. ಹೀಗಾಗಿ ಶಿವನು ಬ್ರಹ್ಮದೇವನಿಗೆ ಶಿಕ್ಷೆಯನ್ನು ಕೊಡಲು ಮುಂದಾಗುತ್ತಾನೆ. ಸರಸ್ವತಿಯು ಬ್ರಹ್ಮನೊಂದಿಗೆ ವಿವಾಹವಾಗುವುದನ್ನ ತಪ್ಪಿಸಿಕೊಳ್ಳಲು ಓಡಿ ಹೋಗಿ ಅವಿತ್ತು ಕುಳಿತಾಗ ಬ್ರಹ್ಮನ ಐದನೇ ತಲೆ ಆಕೆಯನ್ನು ಕಂಡು ಹಿಡಿದಿತ್ತು. ಹೀಗಾಗಿ ಶಿವನು ಬ್ರಹ್ಮನ ಆ ಐದನೇ ತಲೆಯನ್ನು ಕತ್ತರಿಸುತ್ತಾನೆ. ಬ್ರಹ್ಮನ ಐದನೇ ತಲೆ ಯಾವಾಗಲೂ ಕೆಟ್ಟದ್ದನ್ನೇ ಮಾತನಾಡುತ್ತಿತ್ತು ಮತ್ತು ಕೆಟ್ಟದ್ದನ್ನೆ ಯೋಚಿಸುತ್ತಿತ್ತು ಅಂತ ನಂಬಲಾಗಿದೆ. ಆದ್ದರಿಂದ ಶಿವನು ಬ್ರಹ್ಮನ ಐದನೇ ತಲೆಯನ್ನು ಕತ್ತರಿದ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.