Travelಇತ್ತೀಚಿನ ಸುದ್ದಿರಾಜ್ಯ

ಬೆಂಗಳೂರು ಬೆಳಗಾವಿ ವಂದೇ ಭಾರತ್ ರೈಲು ಸಂಚಾರ ಶೀಘ್ರ.

Belagavi-Bengaluru Vande Bharat: ಬೆಂಗಳೂರು ಮತ್ತು ಬೆಳಗಾವಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವರು ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ರೈಲಿನ ವೇಳಾಪಟ್ಟಿ ಮತ್ತು ಮಾರ್ಗವನ್ನು ಪ್ರಕಟಿಸಲಾಗುವುದು. ಈ ರೈಲು ಸಂಚಾರದಿಂದ ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಬೆಂಗಳೂರಿಗೆ ಪ್ರಯಾಣಿಸಲು ಅನುಕೂಲವಾಗಲಿದೆ.

ಅತಿ ಶೀಘ್ರದಲ್ಲಿಯೇ ಬೆಂಗಳೂರು ಬೆಳಗಾವಿ ಮಧ್ಯೆ ವೆಂದೇ ಭಾರತ್ ರೈಲು ಸಂಚರಿಸಲಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಮತ್ತು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ನವದೆಹಲಿಯಲ್ಲಿ ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.ಸಚಿವ ಪ್ರಲ್ಹಾದ ಜೋಶಿ ಅವರ ದೆಹಲಿ ಸಂಸದೀಯ ಕಚೇರಿಯಲ್ಲಿ ಸಚಿವರು ಮತ್ತು ಮಾಜಿ ಸಿಎಂ ಸೇರಿ, ಬೆಂಗಳೂರಿನಿಂದ ಬೆಳಗಾವಿವರೆಗೆ ವಂದೇ ಭಾರತ್ ರೈಲು ಸಂಚಾರ ಕುರಿತ ಸಾಧಕ ಬಾಧಕಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸುವ ಕುರಿತು ಈ ಹಿಂದೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಬೆಳಗಾವಿ ಶಾಸಕ ಅಭಯ ಪಾಟೀಲ್ ಸಹ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಸಚಿವ ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿಯ ತಮ್ಮ ಲೋಕಸಭಾ ಕ್ಷೇತ್ರದ ಕಾರ್ಯಾಲಯದಲ್ಲಿ ನೈಋತ್ಯ ವಲಯದ ರೈಲ್ವೆ ಜನರಲ್ ಮ್ಯಾನೇಜರ್, ಡಿಆರ್​ಎಮ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬೆಂಗಳೂರಿನಿಂದ ಬೆಳಗಾವಿವರೆಗೆ ವಂದೇ ಭಾರತ್ ರೈಲು ಸಂಚಾರ ವಿಸ್ತರಣೆ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು.

ವಂದೇ ಭಾರತ್ ರೈಲು ಬೆಳಗ್ಗೆ ಬೆಳಗಾವಿಯಿಂದ ಹೊರಟು ಬೆಂಗಳೂರು ತಲುಪಿ ಮತ್ತೆ ಬೆಂಗಳೂರಿಂದ ಬೆಳಗಾವಿಗೆ ರಾತ್ರಿ ತಲುಪುವ ಹಾಗೆ ವೇಳಾಪಟ್ಟಿ ನಿಗದಿಗೊಳಿಸಿ ಎಂದು ಸಚಿವ ಪ್ರಲ್ಹಾದ ಜೋಶಿ ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ರೈಲ್ವೆ ಅಧಿಕಾರಿಗಳು ತಾಂತ್ರಿಕ ಅಂಶಗಳನ್ನು ವಿಶ್ಲೇಷಿಸಿ, ಸಾಧಕ-ಬಾಧಕಗಳನ್ನು ಅವಲೋಕಿಸಿ ವರದಿ ಸಲ್ಲಿಸಿದ್ದು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ವರದಿ ಪರಿಗಣಿಸಿ ಬೆಂಗಳೂರು ಹಾಗೂ ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು ಸಂಚಾರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ಅತೀ ಶೀಘ್ರದಲ್ಲಿಯೇ ಬೆಳಗಾವಿ ಹಾಗೂ ಬೆಂಗಳೂರಿನ ಮಧ್ಯೆ ವಂದೇ ಭಾರತ್ ರೈಲಿನ ಆರಂಭದ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.ಈ ರೈಲು ಸಂಚಾರದಿಂದ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಭಾಗದ ಜನತೆಗೆ ಬೆಂಗಳೂರು ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದ ಸಚಿವರು, ನಮ್ಮ ಮನವಿಗೆ ಸ್ಪಂದಿಸಿ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಲು ಸಮ್ಮತಿ ಸೂಚಿಸಿದ ಕೇಂದ್ರ ರೈಲ್ವೆ ಸಚಿವರಿಗೆ ಧನ್ಯವಾದ ಅರ್ಪಿಸುವೆ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button