
ಚೆನ್ನೈ: ಮುಂಬರುವ 2026ರ ವಿಧಾನಸಭಾ ಚುನಾವಣೆಗೆ ಮುನ್ನ ತಮಿಳುನಾಡು ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆ. ಅಣ್ಣಾಮಲೈ ಕೆಳಗಿಳಿಯಲು ನಿರ್ಧರಿಸಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ಅವಧಿ ಮುಗಿದಿದ್ದು, ಶೀಘ್ರದಲ್ಲೇ ಹೊಸ ನಾಯಕನನ್ನು ಆಯ್ಕೆ ಮಾಡಲಾಗುವುದು ಮತ್ತು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹರಿದಾಡುತ್ತಿದೆ. ಅವರ ಬದಲಿಯಾಗಿ ನೈನಾರ್ ನಾಗೇಂದ್ರನ್ ಅವರನ್ನು ಘೋಷಿಸಲಾಗುವುದು ಎಂದು ಹೇಳಲಾಗುತ್ತಿದೆ.ಇಂದು ಕೊಯಮತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, ತಮಿಳುನಾಡು ಬಿಜೆಪಿಯಲ್ಲಿ ಯಾವುದೇ ಸ್ಪರ್ಧೆ ಇಲ್ಲ. ನಾವು ಸರ್ವಾನುಮತದಿಂದ ನಾಯಕನನ್ನು ಆಯ್ಕೆ ಮಾಡ್ತೇವೆ. ರಾಜ್ಯ ಬಿಜೆಪಿ ನಾಯಕತ್ವದ ರೇಸ್‌ನಲ್ಲಿ ನಾನಿಲ್ಲ ಎಂದು ಹೇಳಿದ್ದಾರೆ.
“ನಾನು ದೆಹಲಿಗೆ ಹೋಗಿ ಹೊಸ ನಾಯಕನನ್ನು ನೇಮಿಸಿದ್ದೇನೆ ಎಂದು ಕೆಲವರು ಹೇಳುತ್ತಾರೆ. ನಾನು ಅಂತಹ ವಿಷಯದಲ್ಲಿ ತೊಡಗುವುದಿಲ್ಲ. ನಾನು ಸ್ಪರ್ಧೆಯಲ್ಲಿಲ್ಲ. ನನ್ನ ಮಟ್ಟಿಗೆ ಹೇಳುವುದಾದರೆ ಬಿಜೆಪಿ ಪಕ್ಷ ಒಳ್ಳೆಯದಾಗಿರಬೇಕು. ಬಿಜೆಪಿ ಒಳ್ಳೆಯ ಜನರು ಬರಬಹುದಾದ ಪಕ್ಷ. ಈ ಪಕ್ಷವನ್ನು ಬೆಳೆಸಲು ಅನೇಕ ಜನರು ತಮ್ಮ ಪ್ರಾಣವನ್ನೇ ನೀಡಿದ್ದಾರೆ. ಹೊಸ ನಾಯಕರು ಆಯ್ಕೆಯಾದಾಗ ನಾವು ಈ ಬಗ್ಗೆ ಮಾತನಾಡುತ್ತೇವೆ” ಎಂದು ಅಣ್ಣಾಮಲೈ ಹೇಳಿದರು.