ಇತ್ತೀಚಿನ ಸುದ್ದಿರಾಜ್ಯ

ಬೆಂಗಳೂರಿನಲ್ಲಿ ಹೆಚ್ಚಿದ ಶಾಲಾ ಮಕ್ಕಳ ಬೈಕ್ ಸಂಚಾರ: ಒಂದೇ ದಿನ 1800 ಮಕ್ಕಳ ಪೋಷಕರಿಗೆ ದಂಡ

ಬೆಂಗಳೂರು, ಫೆಬ್ರವರಿ 2: ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವುದರ ಮಧ್ಯೆಯೇ 18 ವರ್ಷ ವಯಸ್ಸಾಗದ, ಚಾಲನಾ ಪರವಾನಗಿ ಹೊಂದಿಲ್ಲದ ಶಾಲೆ, ಕಾಲೇಜು ವಿದ್ಯಾರ್ಥಿಗಳು ಬೈಕ್ ರೈಡ್ ಮಾಡುವ ಪ್ರಕರಣಗಳೂ ಹೆಚ್ಚಾಗಿವೆ. ಡಿಎಲ್ ಇಲ್ಲದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಬೈಕ್ ರೈಡ್ ಮಾಡಿದ ವಿಚಾರವಾಗಿ ಒಂದೇ ದಿನದಲ್ಲಿ ನಗರದಲ್ಲಿ 1800 ಮಕ್ಕಳ ಪೋಷಕರಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ. ಈ ವಿದ್ಯಾರ್ಥಿಗಳು ಡಿಎಲ್ ಇಲ್ಲದೆಯೇ ಬೈಕ್ ರೈಡ್ ಮಾಡಿಕೊಂಡು ಶಾಲೆ, ಕಾಲೇಜಿಗೆ ತೆರಳಿದ್ದರು.

ಸಂಚಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಶಾಲಾ ಕಾಲೇಜುಗಳ ಬಳಿಯೇ ಹೋಗಿ ವಿದ್ಯಾರ್ಥಿಗಳು ತಂದ ವಾಹನಗಳನ್ನು ತಡೆದು ಡಿಎಲ್ ಹಾಗೂ ವಯಸ್ಸು ತಪಾಸಣೆ ಮಾಡಿದ್ದಾರೆ. ನಗರದ ಒಟ್ಟು 150ಕ್ಕೂ ಹೆಚ್ಚು ಶಾಲೆಗಳಲ್ಲಿ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸುಮಾರು 1500ಕ್ಕೂ ಹಚ್ಚು ವಿದ್ಯಾರ್ಥಿಗಳು ನಿಯಮ ಉಲ್ಲಂಘನೆ ಮಾಡಿರೋದು ಪತ್ತೆಯಾಗಿದೆ. ಬಳಿಕ ಅವರ ಪೋಷಕರನ್ನು ಕರೆಸಿ ದಂಡ ವಿಧಿಸಿ ವಾಹನಗಳನ್ನು ಮಕ್ಕಳ ಕೈಗೆ ಕೊಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ನಿಯಮ ಉಲ್ಲಂಘಿಸಿದರೆ ಎಫ್​ಐಆರ್ ದಾಖಲಿಸುವ​ ಎಚ್ಚರಿಕೆ

ಪೋಷಕರನ್ನು ಕರೆಸಿ ದಂಡ ವಿಧಿಸಿದ ಪೊಲೀಸರು, ಪುನಃ ಇದೇ ರೀತಿ ಮಾಡಿದರೆ ಎಫ್​ಐಆರ್ ದಾಖಲಿಸುವುದಾಗಿ ಪೋಷಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಅಲ್ಲದೆ, ಶಾಲೆಗಳಿಂದ ಸುತ್ತೋಲೆ ಕೂಡ ಹೊರಡಿಸಲು ಸೂಚನೆ ನೀಡಿದ್ದಾರೆ. ಡಿಎಲ್ ಇಲ್ಲದ ಹಾಗೂ 18 ವರ್ಷ ತುಂಬದ ವಿದ್ಯಾರ್ಥಿಗಳು ಬೈಕ್ ತರದಂತೆ ಸುತ್ತೋಲೆ ಹೊರಡಿಸಬೇಕು ಎಂದು ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದ್ದಾರೆ. ಇದಕ್ಕೆ ಸಮ್ಮತಿಸಿರುವ ಆಡಳಿತ ಮಂಡಳಿಯವರು ಕೆಲವೇ ದಿನಗಳಲ್ಲಿ ಸುತ್ತೋಲೆ ಹೊರಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಶಾಲಾ ಮಕ್ಕಳು ಬೈಕ್ ರೈಡ್ ಮಾಡಿಕೊಂಡು ತೆರಳುತ್ತಿರವುದು ಅಪಘಾತಗಳಿಗೂ ಕಾರಣವಾಗುತ್ತಿದೆ. ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಹೀಗಾಗಿ ಸಂಚಾರ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಸಂಚಾರ ನಿಯಮ ಹೇಳುವುದೇನು?

ಸಂಚಾರ ನಿಯಮಗಳ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾಯಿಸುವಂತಿಲ್ಲ. ಅವರಿಗೆ ಚಾಲನಾ ಪರವಾನಗಿಯೂ ನೀಡಲಾಗುವುದಿಲ್ಲ. ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಗಂಭೀರ ಅಪರಾಧವಾಗಿದೆ. ಸಾಮಾನ್ಯವಾಗಿ ಇಂಥ ಕೃತ್ಯಕ್ಕೆ ದ್ವಿಚಕ್ರ ವಾಹನಗಳಿಗೆ 1,000 ರೂ. ದಂಡ, ಲಘು ವಾಹನಗಳಿಗೆ 2,00 ರೂ. ದಂಡ ಹಾಗೂ ಭಾರಿ ವಾಹನಗಳ ಚಾಲನೆಗೆ 5,000 ರೂ. ವರೆಗೆ ದಂಡ ವಿಧಿಸಬಹುದಾಗಿದೆ. ಜತೆಗೆ ಜೈಲು ಶಿಕ್ಷೆ ಹಾಗೂ ಇತರ ಕಠಿಣ ಕ್ರಮ ಜರುಗಿಸಲೂ ಅವಕಾಶವಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಾಲನೆ ಮಾಡಿದರೆ ಅವರ ಪೋಷಕರ ಮೇಲೆ ಕೇಸ್ ದಾಖಲಿಸಬಹುದಾಗಿದೆ.

Related Articles

Leave a Reply

Your email address will not be published. Required fields are marked *

Back to top button