ಬೆಂಗಳೂರಲ್ಲಿವೆ ಲಕ್ಷಾಂತರ ದಾಖಲೆ ರಹಿತಕಟ್ಟಡಗಳು, ನಿಯಮ ಉಲ್ಲಂಘಿಸಿರುವ ಅಕ್ರಮ ಕಟ್ಟಡಗಳು!
ರಾಜಧಾನಿಯಲ್ಲಿ ನಕ್ಷೆ ಮಂಜೂರಾತಿ ಉಲ್ಲಂಘಿಸಿರುವ ಮತ್ತು ನಕ್ಷೆ ಇಲ್ಲದೆಯೇ ಕಟ್ಟಿರುವ ಕಟ್ಟಡಗಳ ಸಮೀಕ್ಷೆಯನ್ನೇ ಬಿಬಿಎಂಪಿ ಸ್ಥಗಿತಗೊಳಿಸಿದೆ. ಇದರಿಂದಾಗಿ ನಿಯಮಾವಳಿ ಉಲ್ಲಂಘಿಸಿ ನಿರ್ಮಿಸುತ್ತಿರುವ ಕಟ್ಟಡಗಳಿಗೆ ಅಂಕುಶ ಬೀಳದಂತಾಗಿದೆ. ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ಸ್ವಯಂಪ್ರೇರಿತ ರಿಟ್ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಆದೇಶಿಸಿತ್ತು. ಅದರಂತೆ ಪಾಲಿಕೆಯು, ನಕ್ಷೆ ಮಂಜೂರಾತಿಗೆ ವ್ಯತಿರಿಕ್ತವಾಗಿ ನಿರ್ಮಿಸಿರುವ ಕಟ್ಟಡಗಳು ಹಾಗೂ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಿಸಿರುವ ಕಟ್ಟಡಗಳ ಸಮೀಕ್ಷೆ ಕೈಗೊಂಡಿತ್ತು. 2022ರ ಸೆಪ್ಟೆಂಬರ್ ವೇಳೆಗೆ 2,46,948 ಅಕ್ರಮ ಕಟ್ಟಡಗಳನ್ನು ಗುರುತಿಸಲಾಗಿತ್ತು. ಬಳಿಕ ಸರ್ವೆ ಕಾರ್ಯದ ಸದ್ದಡಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿ-2003 ಹಾಗೂ ಪರಿಷ್ಕೃತ ಮಹಾಯೋಜನೆ-2015ರನ್ವಯ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಲಾಗುತ್ತಿದೆ. ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ಕಟ್ಟಡ ನಿರ್ಮಿಸಿರುವ ಹಾಗೂ ನಕ್ಷೆ ಇಲ್ಲದೆ ಕಟ್ಟಿರುವ ಕಟ್ಟಡಗಳ ಮಾಲೀಕರಿಗೆ ಬಿಬಿಎಂಪಿ ಕಾಯಿದೆ-2020ರ ಸೆಕ್ಷನ್ 313, 248 (1), (2), (3) ಮತ್ತು 356ರಂತೆ ನೋಟಿಸ್ ನೀಡುವ ಅಧಿಕಾರವನ್ನು ವಲಯ ವ್ಯಾಪ್ತಿಯ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳಿಗೆ ನೀಡಲಾಗಿದೆ.
ನೋಟೀಸ್ ಬಳಿಕ ಕ್ರಮವಿಲ್ಲ
ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲೂ2022ರ ಸೆಪ್ಟೆಂಬರ್‌ವರೆಗೆ ಸರ್ವೆ ಕಾರ್ಯ ಕೈಗೊಂಡು 2,46,948 ಕಟ್ಟಡಗಳನ್ನು ಗುರುತಿಸಲಾಗಿದೆ. ಇದರಲ್ಲಿ ಬಿಬಿಎಂಪಿ ಕಾಯಿದೆ-2020ರ ಕಲಂ 313 ರಡಿ ಯಲ್ಲಿ 43,904 ಕಟ್ಟಡಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕಲಂ 248 (1)(2)ರ ಅಡಿಯಲ್ಲಿ 24,475 ಕಟ್ಟಡಗಳು ಮತ್ತು 248(3) ಅಡಿಯಲ್ಲಿ 229 ಕಟ್ಟಡಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಆನಂತರ ಯಾವುದೇ ಕ್ರಮ ಕೈಗೊಂಡಿಲ್ಲ.