ಪೊಲೀಸ್ ಕಾನ್ಸ್‌ಟೇಬಲ್ ಮನೆಯಲ್ಲೇ ಚಿನ್ನ, ಬೆಳ್ಳಿ, ಹನ ಎಗರಿಸಿದ ಖದೀಮರು

ಚಾಮರಾಜನಗರ:ಜಿಲ್ಲೆಯಲ್ಲಿ ಕಳ್ಳರ ಕರಾಮತ್ತು ಮುಂದುವರೆದಿದೆ. ಇದೀಗ ಪೊಲೀಸ್ ಸಿಬ್ಬಂದಿ ಮನೆಯಲ್ಲೇ ಕಳ್ಳರು ಕೈ ಚಳಕ ತೋರಿರುವ ಘಟನೆ ನಗರದ ಹೊಸ ವಿಎಚ್‌ಪಿ ಶಾಲೆ ಸಮೀಪದ ಮನೆಯಲ್ಲಿ ನಡೆದಿದೆ. ಹಾಗಾದರೆ ಈ ಘಟನೆ ನಡೆದಿದ್ದು ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಚಾಮರಾಜನಗರ ಪಟ್ಟಣ ಠಾಣೆ ಕಾನ್ಸ್‌ಟೇಬಲ್ ಮನುಕುಮಾರ್ ಎಂಬವವರ ಮನೆಯಲ್ಲಿ ಕಳ್ಳತನ ಆಗಿದ್ದು, 93 ಗ್ರಾಂ ಚಿನ್ನ, ಒಂದೂವರೆ ಕೆ.ಜಿ. ಬೆಳ್ಳಿ, 40,000 ರೂಪಾಯಿ ಹಣವನ್ನು ಹೊತ್ತೊಯ್ದಿದ್ದಾರೆ. ಮನೆ ಮಂದಿ ಕಳೆದ ಸೋಮವಾರದಂದು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಇಂದು ಮಧ್ಯಾಹ್ನ ಬಂದು ನೋಡಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದನ್ನು ಗಮನಿಸಿ ಕಳ್ಳರು ಬಾಗಿಲು ಮೀಟಿ ಕೃತ್ಯ ಎಸಗಿದ್ದಾರೆ.
ಜಿಲ್ಲೆಯಲ್ಲಿ ಕಳವು ಪ್ರಕರಣಗಳು ಒಂದರ ಹಿಂದೆ ಒಂದಂತೆ ನಡೆಯುತ್ತಿದ್ದು, ಇದೀಗ ಖಾಕಿ ಮನೆಗೇ ಕಳ್ಳರು ಕನ್ನ ಹಾಕಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಗುಂಡ್ಲುಪೇಟೆ ಪಟ್ಟಣದಲ್ಲಿ ಆಟೋ ಚಾಲಕ ಸೇರಿದಂತೆ ಇಬ್ಬರ ಮನೆಯಲ್ಲಿ ಕನ್ನ ಹಾಕಿ ನಗದು, ಚಿನ್ನ ಎಗರಿಸಿದ್ದರು.