ಇತ್ತೀಚಿನ ಸುದ್ದಿ

ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಬಗ್ಗೆ ತನಿಖೆ ನಡೆಯುತ್ತಿದೆ: ವಿದೇಶಾಂಗ ಸಚಿವಾಲಯ

ನವದೆಹಲಿ: ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಭೇಟಿಯಾದ ಸಚಿನ್‌ ಮೀನಾ ಎಂಬಾತನಿಗಾಗಿ ಭಾರತಕ್ಕೆ ನುಸುಳಿರುವ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಪ್ರಕರಣದ ಸಚಿವಾಲಯದ ಗಮನಕ್ಕೆ ಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ.

ಸದ್ಯ ಸೀಮಾ ಹೈದರ್ ಮತ್ತು ಪ್ರಿಯಕರ ಸಚಿನ್​ ಇಬ್ಬರೂ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕರಾಚಿ ಮೂಲದ 30 ವರ್ಷದ ಸೀಮಾ ಗುಲಾಮ್ ಹೈದರ್ ಮತ್ತು ಭಾರತದ 22 ವರ್ಷದ ಸಚಿನ್ ಮೀನಾ ಎಂಬಾತ 2019ರಲ್ಲಿ ಪಬ್​​ಜಿ ಗೇಮ್​ ಮೂಲಕ ಸಂಪರ್ಕಕ್ಕೆ ಬಂದಿದ್ದರು. ಸಚಿನ್​ಗಾಗಿ ನೇಪಾಳದ ಮೂಲಕ ಸೀಮಾ ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಬಂದ ಬಳಿಕ 1,300 ಕಿ.ಮೀ ದೂರದಲ್ಲಿ ವಾಸಿಸುತ್ತಿದ್ದ ಈ ಇಬ್ಬರ ನಡುವೆ ನಾಟಕೀಯ ಪ್ರೇಮಕಥೆ ಬಯಲಿಗೆ ಬಂದಿತ್ತು.

ಪೊಲೀಸರ ಪ್ರಕಾರ, ಸೀಮಾ ಹೈದರ್ ಮತ್ತು ಆಕೆಯ ನಾಲ್ವರು ಮಕ್ಕಳು ಮೇ 13ರಿಂದ ಸಚಿನ್​ ಮೀನಾ ಜೊತೆಗೆ ಗ್ರೇಟರ್ ನೋಯ್ಡಾದ ರಬುಪುರದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪಾಕ್​ ಮಹಿಳೆ ಭಾರತಕ್ಕೆ ನುಸುಳಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಜುಲೈ 4ರಂದು ಗೌತಮ್ ಬುದ್ಧ ನಗರ ಪೊಲೀಸರು ಹೈದರ್ ತನ್ನ ನಾಲ್ವರು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಬಂಧಿಸಿದ್ದರು. ಅಲ್ಲದೇ, ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಆಕೆಯ ಪ್ರಿಯಕರ ಸಚಿನ್ ಮೀನಾ ಮತ್ತು ಆತನ ತಂದೆಯನ್ನೂ ಬಂಧಿಸಲಾಗಿತ್ತು. ಇದಾದ ನಾಲ್ಕು ದಿನಗಳ ನಂತರ ಇಬ್ಬರಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಇದೀಗ ಸೀಮಾ ಹೈದರ್ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿದ್ದು, ನಮಗೆ ಈ ಪ್ರಕರಣದ ಬಗ್ಗೆ ಮಾಹಿತಿ ಇದೆ. ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಇದೀಗ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಪ್ರಕರಣವು ತನಿಖೆ ಹಂತಯಲ್ಲಿದೆ. ಮುಂದೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ, ಇದೇ ಸೋಮವಾರ ಹಾಗೂ ಮಂಗಳವಾರ ಈ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಗುಲಾಮ್‌ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಪಾಕಿಸ್ತಾನದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಆಕೆಗೆ ಕೇಳಿ ಉತ್ತರಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ, ಸೀಮಾ ವಿಚಾರಣೆಯ ವಿಡಿಯೋ ರೆಕಾರ್ಡಿಂಗ್ ಮಾಡಿರುವ ಎಟಿಎಸ್ ಅಧಿಕಾರಿಗಳು, ಅದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಹಿರಿಯ ಅಧಿಕಾರಿಗಳಿಗೂ ರವಾನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button