ಕ್ರೈಂ
Trending

ನರೇಗಾ ಯೋಜನೆ ಹಣ ಲೂಟಿ ಮಾಡಲು ಪುರುಷರಿಗೆ ಮಹಿಳೆ ವೇಷ ಹಾಕಿಸಿದ ಅಧಿಕಾರಿಗಳು!

ಯಾದಗಿರಿ: ಕೆಲಸ ಹುಡುಕಿಕೊಂಡು ಜನ ಊರು ಬಿಟ್ಟು ಮಹಾ ನಗರಗಳಿಗೆ ಗೂಳೆ ಹೋಗಬಾರದು ಮತ್ತು ಕೆಲಸ ಮಾಡಲು ಮನಸ್ಸಿರುವವರಿಗೆ ಸ್ಥಳೀಯವಾಗಿಯೇ ಕೆಲಸ ನೀಡಬೇಕು ಎನ್ನುವ ಉದ್ದೇಶದಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (NREGA Scheme) ಜಾರಿಗೆ ತರಲಾಗಿದೆ. ಇದೇ ಯೋಜನೆಯಡಿ ಕೂಲಿ ಕೆಲಸವನ್ನ ನೀಡಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಈ ಯೋಜನೆಯನ್ನ ಅಧಿಕಾರಿಗಳು (Officials) ದುರ್ಬಳಕೆ ಮಾಡಿಕೊಂಡಿದ್ದಾರೆ. ಪುರುಷರಿಗೆ ಮಹಿಳೆಯರ ವಸ್ತ್ರವನ್ನ ಧರಿಸಿ ಹಣ ಹೊಡೆಯಲು ಹೋಗಿ ಲಾಕ್​ ಆಗಿರುವಂತಹ ಘಟನೆ ನಡೆದಿದೆ.

ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಬಾರಿ ಗೋಲ್ಮಾಲ್ ನಡೆದಿದೆ. ಬಡವರಿಗಾಗಿ ಬಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪಂಚಾಯತಿ ಅಧಿಕಾರಿಗಳು ಹಣ ಲಪಟಾಯಿಸಲು ಹೋಗಿ ಸಿಕ್ಕಿ ಬಿದ್ದಿದ್ದಾರೆ. ಅಷ್ಟಕ್ಕೂ ಇಲ್ಲಿ ಆಗಿದ್ದಾದ್ದರೂ ಏನು ಅಂದರೆ, ನರೇಗಾ ಯೋಜನೆಯಡಿ ಮಲ್ಹಾರ್ ಪಂಚಾಯತಿ ವ್ಯಾಪ್ತಿಯಲ್ಲಿ ನಿಂಗಪ್ಪ ಪೂಜಾರಿ ಎಂಬ ರೈತನ ಜಮೀನಿನ ನಾಲಾ ಹೂಳೆತ್ತುವ ಕೆಲಸ ಮಾಡಲಾಗಿದೆ.ನೂರಾರು ಜನ ಕೂಲಿ ಕಾರ್ಮಿಕರಿಗೆ ಈ ಕೆಲಸ ಕೊಡುವ ಉದ್ದೇಶದಿಂದ ಕೆಲಸ ಆರಂಭಿಸಲಾಯ್ತು. ಜಾಬ್ ಕಾರ್ಡ್ ಹೊಂದಿರುವ ಮಹಿಳೆಯರು ಹಾಗೂ ಪುರುಷ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಳೆದ ಫೆಬ್ರವರಿಯಲ್ಲಿ ಕೆಲಸ ಆರಂಭವಾಗಿದ್ದು, ಸುಮಾರು ನೂರಾರು ಜನ ಕಾರ್ಮಿಕರು ನಾಲೆಯ ಹೂಳೆತ್ತುವ ಕೆಲಸ ಮಾಡುತ್ತಿದ್ದರು. ಆದರೆ ಇಲ್ಲಿ ಕೆಲಸ ಇನ್ನು ಬಾಕಿ ಇರುವಾಗಲೇ ಹಣ ಹೊಡೆಯೋಕೆ ಅಧಿಕಾರಿಗಳು ಮಾಸ್ಟರ್​ ಪ್ಲ್ಯಾನ್​ ಮಾಡಿದ್ದರು. ಬೆಳಗ್ಗೆ ಕೆಲಸ ಆರಂಭದ ಒಂದು ಫೋಟೋ ಅಪ್ಲೋಡ್ ಮಾಡಬೇಕು. ಬಳಿಕ ಸಂಜೆ ವೇಳೆ ಒಂದು ಪೋಟೋ ಅಪ್ಲೋಡ್ ಮಾಡಬೇಕು. ಇಲ್ಲಿ ಅಧಿಕಾರಿಗಳು ಮಾಡಿದ್ದ ಕೆಲಸ ಏನು ಅಂದರೆ ಮಹಿಳೆಯರು ಕೆಲಸಕ್ಕೆ ಬಾರದೆ ಇದ್ದರೂ ಪುರುಷರನ್ನ ಮಹಿಳೆಯರ ವೇಷದಲ್ಲಿ ರೆಡಿ ಮಾಡಿ ಹಾಜರಿ ಹಾಕಿಸಿದ್ದಾರೆ.ಫೋಟೋದಲ್ಲಿ ಮಹಿಳೆಯರೇ ಇದ್ದಾರೆ ಎನ್ನುವ ಹಾಗೆ ಐದು ಜನ ಪುರುಷರನ್ನ ಮಹಿಳೆಯರ ಸೀರೆ ಉಡಿಸಿ ಪುರುಷರ ಪಕ್ಕದಲ್ಲಿ ನಿಲ್ಲಿಸಿ ಫೋಟೋ ಹಾಕಿದ್ದಾರೆ. ಮುಖದ ಮೇಲೆ ಮೀಸೆ ಇರುವುದು ಗೊತ್ತಾಗಬಾರದು ಎಂದು ಸೀರೆಯಿಂದ ಮುಖವನ್ನ ಮುಚ್ಚಿಸಲಾಗಿದೆ. ಕಳೆದ ಫೆಬ್ರವರಿ 5 ರಂದು ಕೆಲಸ ಮಾಡಲಾಗಿದೆ ಎಂದು ಫೋಟೋ ಅಪ್ಲೋಡ್ ಮಾಡಲಾಗಿದೆ. ಆದರೆ ಅನುಮಾನಗೊಂಡ ಹಿರಿಯ ಅಧಿಕಾರಿಗಳು ಪರಿಶೀಲನೆ ಮಾಡಿದ ಬಳಿಕ ಪಂಚಾಯತಿ ಅಧಿಕಾರಿಗಳ ಕಳ್ಳಾಟ ಬಯಲಾಗಿದೆ.

ನರೇಗಾ ಕೆಲಸವನ್ನ ಪಂಚಾಯತಿಯಲ್ಲಿ ಮೇಲ್ವಿಚಾರಣೆ ಮಾಡುತ್ತಿದ್ದ ವಿರೇಶ್ ಎಂಬ ಹೊರ ಗುತ್ತಿಗೆ ನೌಕರ ಈ ಕೆಲಸ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಕೂಡಲೇ ಅಧಿಕಾರಿಗಳು ವಿರೇಶ್​ರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಇದು ಕೇವಲ 5 ರಂದು ನಡೆದ ಘಟನೆ ಮಾತ್ರ ಆದರೆ ಇದಕ್ಕೂ ಮೊಲದು ಮೇಲ್ಧಿಕಾರಿಗಳ ಕಣ್ಣು ತಪ್ಪಿಸಿ ಇನ್ನೇಷ್ಟು ಬಾರಿ ಈ ರೀತಿಯ ಕೆಲಸ ಮಾಡಿದ್ದಾರೆ ಎನ್ನೋದು ಹೆಚ್ಚಿನ ತನಿಖೆ ನಡೆದ ಮೇಲೆಯೇ ಗೊತ್ತಾಗಲಿದೆ.ಇನ್ನು ನಿಂಗಪ್ಪ ಪೂಜಾರಿ ಜಮೀನಿನ ನಾಲಾ ಹೂಳೆತ್ತುವ ಕೆಲಸದ ಬಿಲ್ ಎತ್ತುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಯಾದಗಿರಿ ತಾಲೂಕು ಪಂಚಾಯತಿ ಮುಖ್ಯಾಧಿಕಾರಿ ಮಹಾದೇವಪ್ಪ ಕೇಳಿದರೆ ವಿರೇಶ್​ರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಮಹಿಳೆಯರು ಕೆಲಸಕ್ಕೆ ಬಾರದೆ ಇದ್ದಾಗ ಈ ರೀತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button