ನನ್ನನ್ನು ಅನರ್ಹಗೊಳಿಸಿ, ಜೈಲಿಗೆ ಹಾಕಿದರೂ ಕೂಡ ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲ: ರಾಹುಲ್ ಗಾಂಧಿ
ನವದೆಹಲಿ: ಲೋಕಸಭಾ ಸದಸ್ಯರಾಗಿ ಅನರ್ಹಗೊಂಡ ನಂತರ ಮೊದಲ ಬಾರಿಗೆ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಗೌತಮ್ ಅದಾನಿಗೆ ಸೇರಿದ ಹಲವು ಕಂಪನಿಗಳು ಇವೆ. ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ವ್ಯವಹಾರ ಬಹಳ ವರ್ಷಗಳಿಂದ ಇದೆ. 20,000 ಕೋಟಿ ಹೂಡಿಕೆಗೆ ಸಂಬಂಧಿಸಿದಂತೆ ಅದಾನಿ ಶೆಲ್ ಕಂಪನಿಗಳ ಪುರಾವೆಯನ್ನ ಸದನದಲ್ಲಿ ತೋರಿಸಿದ್ದೇನೆ. ಅದಾನಿ ಮತ್ತು ಆಸ್ಟ್ರೇಲಿಯಾದಲ್ಲಿ ಸ್ಟೇಟ್ ಬ್ಯಾಂಕ್ ಅಧ್ಯಕ್ಷರ ಜೊತೆ ಮೋದಿಯವರು ಇರುವ ಫೋಟೋವನ್ನು ಸಹ ಶೇರ್ ಮಾಡಿದ್ದು, ಇದು ಅವರ ಆಪ್ತತೆಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದಾನಿ ಕಂಪನಿಯಲ್ಲಿ ಹೂಡಿಕೆ ಮಾಡಿರುವ 20,000 ಕೋಟಿ ಬಗ್ಗೆ ಯಾರೂ ಏಕೆ ಪ್ರಶ್ನಿಸುತ್ತಿಲ್ಲ. ಅವರ ಬಳಿ ಇಷ್ಟೊಂದು ಹಣ ಎಲ್ಲಿಂದ ಬಂತು?. ಈ ಅವ್ಯವಹಾರದಲ್ಲಿ ಚೀನಾದ ಪ್ರಜೆ ಕೂಡ ಭಾಗಿಯಾಗಿದ್ದಾನೆ. ಯಾರೂ ಪ್ರಶ್ನೆಗಳನ್ನು ಏಕೆ ಕೇಳುವುದಿಲ್ಲ?. ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಸಂಬಂಧವೇನು? ಎಂದು ರಾಹುಲ್ ಪ್ರಶ್ನಿಸಿದರು.
ಸದಸ್ಯರ ವಿರುದ್ಧ ಕೆಲವು ಆರೋಪಗಳು ಬಂದರೆ ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂಬುದು ಸಂಸತ್ತಿನ ನಿಯಮ. ಆದ್ರೆ, ಕೆಲ ಮಂತ್ರಿಗಳು ಸಂಸತ್ತಿನಲ್ಲಿ ಸುಳ್ಳು ಹೇಳುತ್ತಿದ್ದಾರೆ. ನಾನು ಲೋಕಸಭೆ ಸ್ಪೀಕರ್‌ಗೆ ವಿವರವಾದ ಉತ್ತರ ನೀಡುವಂತೆ ಪತ್ರ ಬರೆದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಅವರ ಕೊಠಡಿಗೆ ಹೋದೆ. ಆದರೆ, ಅವರು ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಜೊತೆಗೆ, ನಾನು ವಿದೇಶಿ ಶಕ್ತಿಗಳ ಸಹಾಯ ಕೇಳಿದ್ದೇನೆ ಅಂತ ಕೆಲವು ಸಚಿವರು ಸುಳ್ಳು ಹೇಳಿದರು. ಆದರೆ, ನಾನು ಅಂತಹ ಯಾವುದೇ ಕೆಲಸ ಮಾಡಿಲ್ಲ. ಮುಂದೆಯೂ ಸಹ ಮೋದಿ ಮತ್ತು ಅದಾನಿ ನಡುವಿನ ಸಂಬಂಧವನ್ನು ಪ್ರಶ್ನಿಸುತ್ತಲೇ ಇರುತ್ತೇನೆ. ನಾನು ದೇಶದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿದ್ದೇನೆ ಮತ್ತು ನಾನು ಯಾರಿಗೂ ಹೆದರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಇನ್ನು ಮೋದಿ ಸರ್ನೇಮ್ ವ್ಯಂಗ್ಯ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆ ಮಾರ್ಚ್ 24 ರಂದು ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ.