ಆರೋಗ್ಯಇತ್ತೀಚಿನ ಸುದ್ದಿರಾಜ್ಯ

ದಾಹ ನೀಗಿಸದ ಶುದ್ಧ ಕುಡಿಯುವ ನೀರಿನ ಘಟಕಗಳು!

ದುರಸ್ತಿಯಲ್ಲಿರುವ 60ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳು….

ಕೊರಟಗೆರೆ:- ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ನೀಡುವ ಸದುದೇಶದೊಂದಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಿದರಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವರ್ಷಾನುಗಟ್ಟಲೆಯಿಂದಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿರುವ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸುತ್ತಿರುವುದಲ್ಲದೆ ಸಾರ್ವಜನಿಕರು ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುವಂತಹ ವಾತಾವರಣ ನಿರ್ಮಾಣವಾಗಿದೆ.

ಕೊರಟಗೆರೆ ತಾಲೂಕಿನಲ್ಲಿ ಒಟ್ಟು 188 ಶುದ್ದ ಕುಡಿಯುವ ನೀರಿನ ಘಟಕಗಳಿದ್ದು, 10 ಕೊರಟಗೆರೆ ಪಟ್ಟಣದಲ್ಲಿ , 118 ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಗಳ ಗ್ರಾಮಗಳಲ್ಲಿ ಅನುಷ್ಠಾನ ಗೊಂಡಿದೆ, 32 ಗ್ರಾಮ ಪಂಚಾಯಿತಿಗಳ ಅಧೀನದಲ್ಲಿ ಬಳಕೆಯಾಗುತ್ತಿದ್ದು, 6 ಘಟಕಗಳು ಹಾಲು ಉತ್ಪಾದಕ ಸಹಕಾರ ಸಂಘಗಳ ಅದೀನದಲ್ಲಿ ನಡೆಯುತ್ತಿದ್ರೆ ಉಳಿದಂತೆ 22 ಕೆ ಆರ್ ಐ ಡಿ ಲ್ಯಾಂಡ್ ಆರ್ಮಿ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 188 ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕನಿಷ್ಠ 60ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿಗಾಗಿ ಅಲೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಸಾರ್ವಜನಿಕರ ಆರೋಗ್ಯ ದೃಷ್ಟಿಗಾಗಿ ಫ್ಲೋರೈಡ್ ಹಾಗೂ ಕಬ್ಬಿಣಂಶದ ನೀರಿನ ಸೇವೆನೆ ಮುಕ್ತಗೊಳಿಸುವ ಉದ್ದೇಶದಿಂದ
ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮಹತ್ವಕಾಂಕ್ಷಿಯೊಂದಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಿದರಾದರೂ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಂಬಂಧಪಟ್ಟ ಏಜೆನ್ಸಿಗಳ ನಿರ್ಲಕ್ಷದಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ವರ್ಷಾನುಗಟ್ಟಲೆ ದುರಸ್ತಿಯಲ್ಲಿರುವ ಮೂಲಕ ಕೋಟ್ಯಾಂತರ ರೂಪಾಯಿ ಅನುದಾನ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿರುವುದಲ್ಲದೆ ಸಾರ್ವಜನಿಕರು ಶುದ್ಧ ಕುಡಿಯುವ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ಅಲೆಯುವಂತ ಪರಿಸ್ಥಿತಿ ನಿರ್ಮಾಣವಾಗಿರೋದು ದುರದೃಷ್ಟಕರ ಎಂದು ಕೆಲವು ನಾಗರಿಕರು ವ್ಯವಸ್ಥೆಯ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಮತ್ತೇ ಮರಿಚಿಕೆಯಾಗಿದ್ದು, ಘಟಕಗಳು
ಆರಂಭದಿಂದಲೂ ಒಂದಿಲ್ಲೊಂದು ಸಮಸ್ಯೆಗಳಿಂದ ಬಳಲುತ್ತಾ ಹಾಗೂ ಹೀಗೂ ಕೆಲವು ತಿಂಗಳ ಕಾಲ ಕಾರ್ಯನಿರ್ವಹಿಸಿದ ಈ
ಘಟಕಗಳು ಮತ್ತೆ ನಿಂತು ಹೋಗಿವೆ. ಒಟ್ಟಿನಲ್ಲಿ ಹೆಸರಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕ ಎನ್ನುವಂತಾಗಿದ್ದು, ಜನರಿಗೆ
ಇದರ ಉಪಯೋಗವಾಗುವಂತೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿ ಜೊತೆಗೆ ನಿರ್ವಹಣೆಯ ಜವಾಬ್ದಾರಿ ಹೊತ್ತು ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಜಿಲ್ಲಾ ಪಂಚಾಯಿತಿ ಶೀಘ್ರ ಕ್ರಮ ವಹಿಸಿ ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರಿನ ಬಳಕೆಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಕೊರಟಗೆರೆ ತಾಲೂಕಿನಲ್ಲಿ 188 ಶುದ್ದ ಕುಡಿಯುವ ನೀರಿನ ಘಟಕಗಳ ಪೈಕಿ 60ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿದ್ದು, ಇದರಲ್ಲಿ 20ಕ್ಕೂ ಹೆಚ್ಚು ಘಟಕಗಳು ಕೆಟ್ಟು ನಿಂತು ವರ್ಷಾನುಗಟ್ಟಲೆ ಕಳೆದರೂ ಅಧಿಕಾರಿ ವರ್ಗ ಜವಾಬ್ದಾರಿ ವಹಿಸದೆ ಎಷ್ಟೋ ಘಟಕಗಳ ಯಂತ್ರೋಪಕರಣಗಳು ತುಕ್ಕು ಹಿಡಿದು ನಿಷ್ಪ್ರಯೋಜಕವಾಗುತ್ತಿದ್ದು, 5 ಲಕ್ಷ 8 ಲಕ್ಷ 10 ಲಕ್ಷ 15 ಲಕ್ಷದವರೆಗೂ ಕೆಲವೊಂದು ಶುದ್ಧ ಕುಡಿಯುವ ನೀರಿನ ಘಟಕಗಳು ಪ್ರಾರಂಭಗೊಂಡಿದ್ದು, 30ಕ್ಕೂ ಹೆಚ್ಚು ಘಟಕಗಳು 2-3ವರ್ಷಗಳಿಂದ ನಿಂತು ಹೋಗಿರುವುದರಿಂದ ಯಂತ್ರೋಪಕರಣಗಳು ತುಕ್ಕು ಹಿಡಿದು ಯಾವುದೇ ಪ್ರಯೋಜನಕ್ಕೆ ಬಾರದ ರೀತಿಯಲ್ಲಿ ನಿಷ್ಕ್ರಿಯವಾಗಿರುವುದರಿಂದ ಕೋಟ್ಯಾಂತರ ರೂಪಾಯಿ ಅನುದಾನ ಸರ್ಕಾರಕ್ಕೆ ನಷ್ಟವಾಗಿದೆ ಎಂದು ಕೆಲವು ಸಾರ್ವಜನಿಕರು ಇಲಾಖೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೊರಟಗೆರೆ ತಾಲೂಕಿನ ಬಹುತೇಕ ಎಸ್ ಸಿ ಎಸ್ ಟಿ ಕಾಲೋನಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿದ್ದು, ಶಿರಗೋನಹಳ್ಳಿ ಲಂಬಾಣಿ ತಾಂಡಾದಲ್ಲಿ 10 ಲಕ್ಷದ ಅನುದಾನದಲ್ಲಿ ಪ್ರಾರಂಭವಾದ ಕುಡಿಯುವ ನೀರಿನ ಘಟಕ ಪ್ರಾರಂಭವಾದ ಎರಡು ದಿನ ಮಾತ್ರ ಕಾರ್ಯನಿರ್ವಹಿಸಿ ಕಳೆದ 3 ವರ್ಷಗಳಿಂದ ದುರಸ್ತಿಯಲ್ಲಿರುವ ಕಾರಣ ಇಲ್ಲಿನ ಎಲ್ಲಾ ಯಂತ್ರೋಪಕರಣಗಳು ತುಕ್ಕು ಹಿಡಿದಿದ್ದು ಯಾವುದೇ ಪ್ರಯೋಜನಕ್ಕೆ ಬಾರದ ರೀತಿಯಲ್ಲಿದ್ದು ಇಲ್ಲಿನ ಜನ ಲ್ಯಾಂಡ್ ಆರ್ಮಿ ಹಾಗೂ ಸಂಬಂಧ ಪಟ್ಟ ಏಜೆನ್ಸಿ ವಿರುದ್ಧ ಆರೋಪಗಳ ಸುರಿಮಳೆಗೆರೆಯುತ್ತಿದ್ದಾರೆ.

ಉಳಿದಂತೆ ಸಾಮಾನ್ಯವಾಗಿ ಬಿ.ಡಿ.ಪುರದಲ್ಲಿ ಒಂದು ಕಳೆದ ಎರಡು ವರ್ಷಗಳಿಂದ ಬೆಳಕಿಗೆ ಬಾರದೆ ತುಕ್ಕು ಹಿಡಿದರೆ ರಾಯವಾರ ಎಕೆ ಕಾಲೋನಿಯ ಶುದ್ಧ ಕುಡಿಯುವ ನೀರಿನ ಘಟಕ ಎರಡು-ಮೂರು ವರ್ಷಗಳಿಂದ ದುರಸ್ತಿಯಲ್ಲಿದೆ, ಅರಸಾಫುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಾಲ್ಕು ಘಟಕಗಳು ದುರಸ್ತಿತಿಯಲ್ಲಿದ್ದರೆ, ಬೈಚಾಪುರ ಪಂಚಾಯಿತಿಯಲ್ಲೂ 4 ಕಡೆ ಹೀಗೆ ಪ್ರತಿ ಪಂಚಾಯತಿಯಲ್ಲೂ 24 ಗ್ರಾಮ ಪಂಚಾಯಿತಿಗಳಲ್ಲಿಯೂ 3-4 ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿದ್ದು ಅಲ್ಲಿನ ಜನ ಶುದ್ಧ ಕುಡಿಯುವ ನೀರಿಗಾಗಿ ಐದಾರು ಕಿಲೋಮೀಟರ್ ದೂರ ಅಲೆದು ನೀರು ತರುವಂತಹ ಅನಿವಾರ್ಯತೆ ಓದಗಿರುವುದು ದುರಂತವೇ ಸರಿ.

ಕಳೆದ ಎರಡು ವರ್ಷಗಳ ಹಿಂದೆ ಸತತವಾಗಿ 15 -20 ವರ್ಷಗಳ ಕಾಲ ಬರಗಾಲ ದಿಂದ ತತ್ತರಿಸಿದ ಕಾರಣ ನೀರಿನ ಮಟ್ಟ ಕೆಳಗಿಳಿದು ಅಂತರ್ಜಲ ಮಟ್ಟ ಕುಸಿತದಿಂದ ಬಹಳ ಆಳದ 800 -900 ಅಡಿ ಆಳದ ಫ್ಲೋರೈಡ್ ಯುಕ್ತ ನೀರಿನ ಬಳಕೆಯಿಂದ ಜೊತೆಗೆ ಕೆಲವೊಂದು ಪ್ರದೇಶಗಳಲ್ಲಿ ಕಬ್ಬಿಣಂಶವುಳ್ಳ ನೀರಿನ ಬಳಕೆಯಿಂದ ಮೂಳೆ ಸವೆತಾ ಸೇರಿದಂತೆ ಇನ್ನಿತರ ದುಷ್ಪರಿಣಾಮಗಳಿಂದ ನರಳುತ್ತಿದ್ದ ಜನತೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಕಾಂಕ್ಷಿಯೊಂದಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ಬಳಿಸಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿದರಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಡೀ ಯೋಜನೆ ಹಳ್ಳ ಹಿಡಿದು , ಸಾರ್ವಜನಿಕರು ಶುದ್ಧ ಕುಡಿಯುವ ನೀರಿಗಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಒಟ್ಟಾರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅತಿ ಹೆಚ್ಚು ಕುಡಿಯುವ ನೀರಿನ ಮತ್ತು ನೈರ್ಮಲ್ಯದ ಬಗ್ಗೆ ಸಹಭಾಗಿತ್ವ ಹೊಂದಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮತ್ತು ಮೇಲೂ ಉಸ್ತುವಾರಿ ಜವಾಬ್ದಾರಿ ಹೊಂದಿರುವ ಕಾರಣ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಂಡದ್ದೆ ಆದರೆ ಯಾವುದೇ ಕಾರಣಕ್ಕೂ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಯಾವುದೇ ಅಡಚಣೆ ಯಾಗದ ರೀತಿಯಲ್ಲಿ ನಿರ್ಮಿಸಬಹುದು , ಇದರ ಬಗ್ಗೆ ಸಂಬಂಧಪಟ್ಟಂತಹ ಇಲಾಖೆ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಕೆಲವು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button