ಕರಾವಳಿ ಭದ್ರತೆಗೆ ಗಂಭೀರ ಅಪಾಯ ತಂದಿಟ್ಟ ಸರ್ಕಾರದ ಹೊಸ ಆದೇಶ.

ಕರ್ನಾಟಕ ಕರಾವಳಿ ಭದ್ರತೆಗೆ ರಾಜ್ಯ ಸರ್ಕಾರದ ಇಂಧನ ಕಡಿತ ಆದೇಶ ಹೊಡೆತ ನೀಡಿದಂತಿದೆ. ಸಮುದ್ರ ಕಾಯುವ ಕರಾವಳಿ ಕಾವಲು ಪೊಲೀಸ್ ಇಲಾಖೆಗೆ ಪೂರೈಸಲಾಗುತ್ತಿದ್ದ ಇಂಧನ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಡ್ರಗ್ಸ್ ಪೂರೈಕೆ, ಭಯೋತ್ಪಾದನೆ, ಕಳ್ಳ ಸಾಗಣೆಯಂತಹ ಆತಂಕಗಳ ನಡುವೆ ಸರ್ಕಾರದ ಈ ಆದೇಶ ಸಮುದ್ರದ ಮೂಲಕ ನಡೆಯುವ ಅಪಾಯಕಾರಿ ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.
ಕರಾವಳಿ ಕಾವಲು ಪೊಲೀಸ್ ರಾಜ್ಯ ಕರಾವಳಿ ತೀರಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು, ಸಮುದ್ರದ ಮೂಲಕ ವೈರಿಗಳು ದೇಶದ ಗಡಿ ಯೊಳಗೆ ನುಗ್ಗದಂತೆ ಕಾಯುವವರು. ಸಮುದ್ರ ಮಾರ್ಗದಲ್ಲಿ ಯಾವುದೇ ಅಕ್ರಮ ಜರಗದಂತೆ ನೋಡಿಕೊಳ್ಳುವುದೂ ಇದೇ ಕರಾವಳಿ ಕಾವಲು ಪೊಲೀಸ್. ಮಂಗಳೂರಿನಿಂದ ಹಿಡಿದು ಕಾರವಾರದ ವರೆಗೂ ವಿಶಾಲ ಸಮುದ್ರ ತೀರ. ಇಲ್ಲಿ ಯಾವುದೇ ಎಡವಟ್ಟು ಆಗದಂತೆ ಕರಾವಳಿ ಕಾವಲು ಪೊಲೀಸ್ ಸಿಬ್ಬಂದಿ ನಿರಂತರ ಎಚ್ಚರಿಕೆಯಿಂದ ಇರುತ್ತಾರೆ. ಕರ್ನಾಟಕ ಕರಾವಳಿಯ ಉದ್ದಗಲಕ್ಕೂ ಗಸ್ತು ತಿರುಗುತ್ತಿರುತ್ತಾರೆ. ಈ ಗಸ್ತಿನಿಂದಲೇ ಕರಾವಳಿ ಸುರಕ್ಷಿತವಾಗಿರುವುದು. ಆದರೆ, ಕರಾವಳಿ ಕಾವಲು ಪೊಲೀಸ್ ಸಿಬ್ಬಂದಿಯ ಈ ಕಾರ್ಯಕ್ಷಮತೆಗೆ ಸಂಚಕಾರ ಎದುರಾಗಿದೆ.
ಭದ್ರತೆ ಹಿತ ದೃಷ್ಟಿಯಿಂದ ಸಮುದ್ರದಲ್ಲಿ ನಿರ್ಭೀತಿಯಿಂದ ಗಸ್ತು ತಿರುಗುವುದಕ್ಕೆ ಮೀನಾ ಮೇಷ ಎಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗೆ ಕಾರಣವಾಗಿರುವುದು ಸರ್ಕಾರದ ಹೊಸ ಆದೇಶದಿಂದ. ಕರಾವಳಿ ಕಾವಲು ಪಡೆ ಬಳಸುವ ವಾಹನಗಳಿಗೆ ನೀಡಲಾಗುತ್ತಿದ್ದ ಇಂಧನ ಪ್ರಮಾಣವನ್ನು ಕಡಿತಗೊಳಿಸಲಾಗಿದೆ. ಇದರಿಂದ ಕರಾವಳಿ ಕಾವಲು ಪೊಲೀಸ್ ಕಾರ್ಯಚಾರಣೆಗೆ ಹೊಡೆತ ಬಿದ್ದಿದೆ.ಈ ಹಿಂದೆ ಬೋಟ್ ಮೂಲಕ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಕರಾವಳಿ ಕಾವಲು ಪೊಲೀಸ್ ಬೋಟ್ಗಳಿಗೆ ಮಾಸಿಕ 600 ಲೀಟರ್ ಇಂಧನ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ಪ್ರಮಾಣವನ್ನು ಇದೀಗ ಕೇವಲ 250 ಲೀಟರ್ಗೆ ಸೀಮಿತಗೊಳಿಸಲಾಗಿದೆ. ಈ ಇಂಧನ ಕಡಿತದಿಂದ ದಿನಕ್ಕೆ 10 ತಾಸಿನವರೆಗೂ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಕರಾವಳಿ ಕಾವಲು ಪೊಲೀಸ್ ಪಡೆ ಈಗ ಕೇವಲ ಒಂದು ಗಂಟೆ ಸಮುದ್ರದಲ್ಲಿ ಗಸ್ತು ತಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇವಲ ಬೋಟ್ ಮಾತ್ರ ಅಲ್ಲದೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕಾರವಾರದಲ್ಲಿ ಕಾರ್ಯಚರಿಸುವ ಎಲ್ಲಾ ಕರಾವಳಿ ಕಾವಲು ಪೊಲೀಸ್ ವಾಹನಗಳಿಗೆ ನೀಡಲಾಗುತ್ತಿದ್ದ ಇಂಧನ ಪ್ರಮಾಣದಲ್ಲಿ ಶೇಕಡ 50 ರಷ್ಟು ಕಡಿತಗೊಳಿಸಲಾಗಿದೆ. ಇದರಿಂದಾಗಿ, ಬೇಕಾದಷ್ಟು ಪ್ರಮಾಣದಲ್ಲಿ ಸಿಬ್ಬಂದಿ ಇದ್ದರೂ ಅವರನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಾರದಂತಹ ಸ್ಥಿತಿ ನಿರ್ಮಾಣವಾಗಿದೆ.ಕರಾವಳಿಯಲ್ಲಿ ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1, ಉಡುಪಿಯಲ್ಲಿ 3, ಕಾರವಾರದಲ್ಲಿ 5 ಕರಾವಳಿ ಕಾವಲು ಪೊಲೀಸ್ ಸ್ಟೇಷನ್ ಇದೆ. ಒಟ್ಟು 15 ಬೋಟ್ಗಳಲ್ಲಿ ಗಸ್ತಿಗೆ ಬಳಸಲು ಯೋಗ್ಯವಿರುವುದು ಕೇವಲ 9 ಬೋಟ್ಗಳು ಮಾತ್ರ. ಆದರೆ ಇಂಧನ ಕಡಿತದ ಹೊಡೆತದ ಬೆನ್ನಲ್ಲೇ, ಈ ಬೋಟ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆಯೋ ಎಂಬ ಅನುಮಾನ ಮೂಡಿದೆ.