ಇತ್ತೀಚಿನ ಸುದ್ದಿ

ದಂಡ, ಶುಲ್ಕಗಳೇ ಬ್ಯಾಂಕ್‌ಗಳ ದೊಡ್ಡ ಆದಾಯ, ಗ್ರಾಹಕರಿಗೆ ಬರೆ ಹಾಕಿಯೇ ₹35,587 ಕೋಟಿ ಸಂಗ್ರಹ!

ಶುಲ್ಕ, ದಂಡದಿಂದ ಆದಾಯ ವೃದ್ಧಿ

ಮಾಸಿಕ ಸರಾಸರಿ ಬ್ಯಾಲೆನ್ಸ್ (ಮಿನಿಮಮ್‌ ಬ್ಯಾಲೆನ್ಸ್‌) ಕಾಯ್ದುಕೊಳ್ಳದ ಖಾತೆದಾರರಿಗೆ ಬ್ಯಾಂಕ್‌ಗಳು ದಂಡ ವಿಧಿಸುತ್ತವೆ. ಕನಿಷ್ಠ ಮಿನಿಮಮ್‌ ಬ್ಯಾಲೆನ್ಸ್‌ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಇದು ಮಹಾನಗರಗಳಲ್ಲಿ 3,000 ರೂ.ನಿಂದ 10,000 ರೂ. ತನಕ ಇದೆ. ನಗರ ಪ್ರದೇಶಗಳಲ್ಲಿ 2,000 ರೂ.ನಿಂದ 5,000 ರೂ. ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 500 ರೂ.ನಿಂದ 1,000 ರೂ.ವರೆಗೆ ಇರುತ್ತದೆ. ಈ ಬ್ಯಾಲೆನ್ಸ್‌ ಮಾನದಂಡವನ್ನು ಪೂರೈಸಲು ವಿಫಲವಾದರೆ ಖಾತೆದಾರರು ದಂಡ ತೆರಬೇಕಾಗುತ್ತದೆ. ದಂಡದ ಪ್ರಮಾಣವು 400 ರೂ.ನಿಂದ ರಿಂದ 500 ರೂ.ವರೆಗೆ ಇರುತ್ತದೆ. ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಈ ಮೊತ್ತದಲ್ಲಿ ವ್ಯತ್ಯಾಸವಿರುತ್ತದೆ.

ಇನ್ನು ಕೆಲವು ಖಾಸಗಿ ಬ್ಯಾಂಕ್‌ಗಳು ದೊಡ್ಡ ಪ್ರಮಾಣದ ನಗದು ವ್ಯವಹಾರಗಳಿಗೆ, ಒಂದು ವ್ಯವಹಾರಕ್ಕೆ 100-125 ರೂ. ತನಕ ಶುಲ್ಕ ವಿಧಿಸುತ್ತವೆ.

ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ಪ್ರಮುಖ ಐದು ಖಾಸಗಿ ಬ್ಯಾಂಕ್‌ಗಳು ಮಿನಿಮಮ್‌ ಬ್ಯಾಲೆನ್ಸ್‌ ನಿರ್ವಹಿಸಲು ವಿಫಲವಾದ ಖಾತೆದಾರರಿಂದ ಬರೋಬ್ಬರಿ 21,044 ಕೋಟಿ ರೂ.ಗೂ ಹೆಚ್ಚು ಹಣವನ್ನು ಸಂಗ್ರಹಿಸಿವೆ. ಇದೂ ಸೇರಿದಂತೆ 2018ರಿಂದ ಈ ತನಕ ವಿವಿಧ ಶುಲ್ಕಗಳ ನೆಪದಲ್ಲಿ ಒಟ್ಟು 35,587 ಕೋಟಿ ರೂ. ಹಣ ಬ್ಯಾಂಕ್‌ಗಳಿಗೆ ಸೇರಿದಂತಾಗಿದೆ.

ರಾಜ್ಯಸಭೆಗೆ ಹಣಕಾಸು ಖಾತೆ ಸಹಾಯಕ ಸಚಿವ ಭಗವತ್‌ ಕರಾಡ್‌ ಈ ಬಗ್ಗೆ ಲಿಖಿತ ಮಾಹಿತಿ ನೀಡಿದ್ದಾರೆ. ನಿಗದಿತ ಸಂಖ್ಯೆಯ ಉಚಿತ ವಹಿವಾಟುಗಳನ್ನು ಮೀರಿ ಎಟಿಎಂಗಳಲ್ಲಿ ವ್ಯವಹರಿಸಿದ ಗ್ರಾಹಕರಿಗೆ ದಂಡವನ್ನು ವಿಧಿಸಿರುವ ಬ್ಯಾಂಕ್‌ಗಳು, 8,289 ಕೋಟಿ ರೂ.ಗಳಷ್ಟು ಗಣನೀಯ ಮೊತ್ತವನ್ನು ಸಂಗ್ರಹಿಸಿವೆ.

ಮತ್ತೊಂದು ಕಡೆ, ಗ್ರಾಹಕರಿಗೆ ನೀಡಿರುವ ಎಸ್‌ಎಂಎಸ್‌ ಸೇವೆ ಹೆಸರಿನಲ್ಲಿ ಬ್ಯಾಂಕ್‌ಗಳು ಗ್ರಾಹಕರಿಂದ 6,254 ಕೋಟಿ ರೂ.ಮೊತ್ತವನ್ನು ಸಂಗ್ರಹಿಸಿವೆ.

ಎಟಿಎಂ ವಹಿವಾಟು ಮೀರಿದರೆ ಶುಲ್ಕ

ಗ್ರಾಹಕರು ಸಾಮಾನ್ಯವಾಗಿ ತಮ್ಮ ಸ್ವಂತ ಬ್ಯಾಂಕ್‌ ಎಟಿಎಂಗಳಲ್ಲಿ ತಿಂಗಳಿಗೆ ಐದು ಉಚಿತ ವಹಿವಾಟುಗಳಿಗೆ ಅರ್ಹರಾಗಿರುತ್ತಾರೆ. ಜೊತೆಗೆ ಇತರ ಬ್ಯಾಂಕ್‌ ಎಟಿಎಂಗಳಿಂದ ನಿಗದಿತ ಸಂಖ್ಯೆಯ ಉಚಿತ ವಹಿವಾಟುಗಳನ್ನು ಮಾಡಬಹುದು. ಈ ಮಿತಿಯನ್ನು ಮೀರಿದರೆ ಪ್ರತಿ ವಹಿವಾಟಿಗೂ ಬ್ಯಾಂಕ್‌ಗಳು ಶುಲ್ಕವನ್ನು ವಿಧಿಸುತ್ತವೆ.

ಯಾರಿಗೆ ಶುಲ್ಕವಿಲ್ಲ?

ಪ್ರಧಾನ ಮಂತ್ರಿ ಜನಧನ್‌ ಯೋಜನೆ ಮತ್ತು ಬೇಸಿಕ್‌ ಸೇವಿಂಗ್ಸ್‌ ಬ್ಯಾಂಕ್‌ ಖಾತೆದಾರರಿಗೆ ಮಿನಿಮಮ್‌ ಬ್ಯಾಲೆನ್ಸ್‌ ನಿಯಮವು ಅನ್ವಯವಾಗುವುದಿಲ್ಲ. ಆದರೆ, ತಿಂಗಳಿಗೆ ನಾಲ್ಕು ಸಲ ಹಣವನ್ನು ವಿತ್‌ಡ್ರಾ ಮಾಡಲು ಗ್ರಾಹಕರಿಗೆ ಅವಕಾಶ ಇರುತ್ತದೆ. ಎಟಿಎಂ ಅನ್ನು ಒಂದು ಸಲವಷ್ಟೇ ಬಳಸಬಹುದು.

ಬ್ಯಾಂಕ್‌ಗಳು ವಿಧಿಸಿದ ದಂಡ-ಶುಲ್ಕಗಳು

ಮಿನಿಮಮ್‌ ಬ್ಯಾಲೆನ್ಸ್‌ ಕಾಯ್ದುಕೊಳ್ಳದ ಗ್ರಾಹಕರಿಂದ ಬ್ಯಾಂಕ್‌ಗಳು ಸಂಗ್ರಹಿಸಿದ ದಂಡ – 21,044 ಕೋಟಿ ರೂ.

ಅಧಿಕ ಎಟಿಎಂ ವಹಿವಾಟು ನಡೆಸಿದ ಗ್ರಾಹಕರಿಗೆ ವಿಧಿಸಿದ ಶುಲ್ಕದ ಮೊತ್ತ – 8,289 ಕೋಟಿ ರೂ.

ಎಸ್‌ಎಂಎಸ್‌ ಸೇವೆ ನೀಡಿ ಬ್ಯಾಂಕ್‌ಗಳು ಸಂಗ್ರಹಿಸಿದ ಹಣ – 6,254 ಕೋಟಿ ರೂ.

Related Articles

Leave a Reply

Your email address will not be published. Required fields are marked *

Back to top button