ದಂಡ ಪಾವತಿಸದ ಬೈಕ್ ಸವಾರರನ್ನು ಅರೆಸ್ಟ್ ಮಾಡಲು ಪೊಲೀಸ್ ಇಲಾಖೆ ಚಿಂತನೆ!
ಗದಗ, ಜನವರಿ 30 : ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಹಾಗೂ ಜನರ ಸುರಕ್ಷತೆಯ ದೃಷ್ಟಿಯಿಂದ ಥರ್ಟ್ ಐ ಅನುಷ್ಟಾನ ಮಾಡಲಾಗಿದೆ. ಹೆಜ್ಜೆ ಹೆಜ್ಜೆಗೂ ಹೈಟೆಕ್ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ನೇರವಾಗಿ ಮನೆಗೆ ದಂಡದ ನೋಟಿಸ್ ಕಳುಹಿಸಲಾಗುತ್ತಿದೆ. ಆದರೆ, 119 ಬೈಕ್ ಸವಾರರು ಪೊಲೀಸರ ನೋಟಿಸ್ಗಳಿಗೂ ಕ್ಯಾರೇ ಅನ್ನುತ್ತಿಲ್ಲ. 10 ರಿಂದ 16 ಬಾರಿ ನೋಟಿಸ್ ನೀಡಿದರೂ ಕಿಮ್ಮತ್ತು ನೀಡುತ್ತಾ ಇಲ್ಲ. ಹೀಗಾಗಿ ಕಠಿಣ ಕ್ರಮಕ್ಕೆ ಈಗ ಪೊಲೀಸ್ ಇಲಾಖೆ ಮುಂದಾಗಿದ್ದು, ಬೈಕ್ ಸವಾರರನ್ನು ಅರೆಸ್ಟ್ ಮಾಡಿ ಕೋರ್ಟ್ಗೆ ಹಾಜರುಪಡಿಸಲು ಚಿಂತನೆ ನಡೆಸಿದ್ದಾರೆ.
ಮನೆಗೆ 10-15 ಬಾರಿ ನೋಟಿಸ್ ಕಳುಹಿಸಿದರೂ ಕೇರ್ ಮಾಡದ 119 ಬೈಕ್ ಸವಾರರನ್ನು ಪೊಲೀಸ್ ಇಲಾಖೆ ಪತ್ತೆ ಮಾಡಿದೆ. ಅವರಿಗೆ, ದಂಡವನ್ನು ಕಟ್ಟಬೇಕು ಅಥವಾ ಕಠಿಣ ಕಾನೂನು ಕ್ರಮ ಎದುರಿಸಬೇಕು ಎಂದು ಎಚ್ಚರಿಕೆ ನೀಡಿದೆ. ಬೈಕ್ ಸೀಜ್ ಮಾಡುವುದು, ಬೈಕ್ ಸವಾರರನ್ನು ಅರೆಸ್ಟ್ ಮಾಡಿ ಕೋರ್ಟ್ಗೆ ಹಾಜರುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.
ಗದಗ ಬೆಟಗೇರಿ ಅವಳಿ ನಗರದಲ್ಲಿ ಥರ್ಟ್ ಐ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿದೆ. ಗದಗದ ಎಸ್ಪಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಮಾಡೋ ಮೂಲಕ ಹೆಲ್ಮೆಟ್ ಇಲ್ಲದ ಬೈಕ್ ಸವಾರರ ಮನೆಗೆ ನೋಟಿಸ್ ನೀಡಲಾಗುತ್ತಿದೆ. ಕೆಲವು ವಾಹನ ಸವಾರರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಉದ್ದೇಶದಿಂದ ನಂಬರ್ ಪ್ಲೇಟ್ ಕಾಣದಂತೆ, ಹಾಗೂ ನಂಬರ್ ಪ್ಲೇಟ್ನಲ್ಲಿ ಒಂದು ನಂಬರ್ ಬದಲಾವಣೆ ಮಾಡೋ ಮೂಲಕ ಪೊಲೀಸರನ್ನು ಯಾಮಾರಿಸಿದ್ದಾರೆ. ಅಂಥವರ ವಿರುದ್ಧ ಪೊಲೀಸ್ ಇಲಾಖೆ ವಿಶೇಷ ಕಾರ್ಯಚರಣೆ ಮಾಡಿ 150 ಬೈಕ್ ವಶಕ್ಕೆ ಪಡೆದು, ದಂಡವನ್ನು ವಸೂಲಿ ಮಾಡಿದೆ. ನೋಟಿಸ್ ಬಂದವರು, ದಂಡವನ್ನು ಕಟ್ಟುತ್ತಿದ್ದಾರೆ. ಇನ್ಮುಂದೆ ನಂಬರ್ ಪ್ಲೇಟ್ ಬದಲಾವಣೆ ಮಾಡಿದ ಸವಾರರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಪೊಲೀಸ್ ಇಲಾಖೆ ಸಜ್ಜಾಗಿದೆ.
ಹೆಲ್ಮೆಟ್ ಹಾಕಿದರೆ ಅಪಘಾತದ ವೇಳೆ ಸವಾರರ ಜೀವ ಉಳಿಯುತ್ತದೆ. ಆದರೆ, ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಪಘಾತದಲ್ಲಿ ಹೆಡ್ ಇಂಜುರಿಯಿಂದ ಹೆಚ್ಚು ಸಾವಾಗುತ್ತಿವೆ. ಹೀಗಾಗೆ ಹೆಲ್ಮೆಟ್ ಹಾಕಿಕೊಂಡು ಜೀವ ಉಳಿಸಿಕೊಳ್ಳಿ ಅಂತ ಎಸ್ಪಿ ಮನವಿ ಮಾಡಿದ್ದಾರೆ.