ಇತ್ತೀಚಿನ ಸುದ್ದಿದೇಶರಾಜ್ಯ

ಚೆನ್ನೈ-ಬೆಂಗಳೂರು-ಮೈಸೂರು ಸಂಪರ್ಕಿಸಲಿದೆ ಮಹತ್ವದ ಹೈ ಸ್ಪೀಡ್ ರೈಲು ಯೋಜನೆ; ಭೂಸ್ವಾಧೀನಕ್ಕಾಗಿ ಭೂ ಮಾಲೀಕರೊಂದಿಗೆ ಸಭೆ

ಮಹತ್ವಾಕಾಂಕ್ಷೆಯ ಚೆನ್ನೈ-ಬೆಂಗಳೂರು-ಮೈಸೂರು ಹೈ ಸ್ಪೀಡ್ ರೈಲು  ಸಂಪರ್ಕ ಯೋಜನೆಯನ್ನು ಪ್ರಾರಂಭಿಸಲು ರಾಷ್ಟ್ರೀಯ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್  ಮುಂದಾಗಿದ್ದು, ಸಾಮಾನ್ಯ ಸಂಪರ್ಕ ರೇಖಾಚಿತ್ರಗಳ ತಯಾರಿಕೆ, ಸಮೀಕ್ಷೆ, ಮೇಲ್ಸೇತುವೆ, ಅಂಡರ್​ಪಾಸ್ ಸ್ಥಳ ಗುರುತಿಸುವಿಕೆ ಆರಂಭವಾಗಿದ್ದು, ಭೂಸ್ವಾಧೀನಕ್ಕಾಗಿ ಭೂಮಾಲೀಕರೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಮಹತ್ವಾಕಾಂಕ್ಷೆಯ 435-ಕಿಮೀ ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಯೋಜನೆಯು ಆಟೋಮೊಬೈಲ್ ಉತ್ಪಾದನಾ ಕೇಂದ್ರವಾದ ಚೆನ್ನೈ, ಟೆಕ್ ಮತ್ತು ಸ್ಟಾರ್ಟ್-ಅಪ್ ಹಬ್ ಬೆಂಗಳೂರು ಮತ್ತು ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರನ್ನು ಸಂಪರ್ಕಿಸಲಿದೆ.

ಚೆನ್ನೈ-ಬೆಂಗಳೂರು-ಮೈಸೂರು ಪ್ರದೇಶವು ಕಂಪನಿಗಳು, ಟೆಕ್ ಪಾರ್ಕ್‌ಗಳು, ಉತ್ಪಾದನಾ ಘಟಕಗಳು ಮತ್ತು ಟೌನ್‌ಶಿಪ್‌ಗಳನ್ನು ಹೊಂದಿರುವ ಹೆಚ್ಚಿನ ಸಾಂದ್ರತೆಯ ಕಾರಿಡಾರ್ ಆಗಿದೆ. ಹೈಸ್ಪೀಡ್ ರೈಲು ಯೋಜನೆಯು ಮೈಸೂರು ಮತ್ತು ಎರಡು ರಾಜ್ಯಗಳ ರಾಜಧಾನಿಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.

ಪ್ರಸ್ತಾವಿತ ಸಂಪರ್ಕದ ಪ್ರಕಾರ, ಚೆನ್ನೈ-ಬೆಂಗಳೂರು-ಮೈಸೂರು ಹೈ ಸ್ಪೀಡ್ ರೈಲ್​ಗಳಿಗೆ ಒಂಬತ್ತು ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಅವುಗಳೆಂದರೆ: ತಮಿಳುನಾಡಿನಲ್ಲಿ ಚೆನ್ನೈ, ಪೂನಮಲ್ಲಿ, ಅರಕ್ಕೋಣಂ, ಆಂಧ್ರಪ್ರದೇಶದಲ್ಲಿ ಚಿತ್ತೂರು ಹಾಗೂ ಕರ್ನಾಟಕದಲ್ಲಿ ಬಂಗಾರಪೇಟೆ, ಬೆಂಗಳೂರು, ಚನ್ನಪಟ್ಟಣ, ಮಂಡ್ಯ ಮತ್ತು ಮೈಸೂರು.

ಸದ್ಯ ಭೂ ಸಮೀಕ್ಷೆ ನಡೆಯುತ್ತಿದ್ದು, ಸ್ವಾಧೀನ ಹೊಂದಿರುವ ಭೂಮಾಲಿಕರೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿವರವಾದ ಯೋಜನಾ ವರದಿ ನಿಖರವಾದ ಸಂಪರ್ಕ, ನಿಲ್ದಾಣಗಳ ಸ್ಥಳ, ಅಂದಾಜು ಪ್ರಯಾಣಿಕರು ಮತ್ತು ಶುಲ್ಕ ರಚನೆಯನ್ನು ಬಹಿರಂಗಪಡಿಸುತ್ತದೆ.

ಎಚ್‌ಎಸ್‌ಆರ್ ಯೋಜನೆಯು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಮೂಲಕ ಕರ್ನಾಟಕದ ಬೆಂಗಳೂರಿನ ಹೊಸಕೋಟೆ ಮತ್ತು ಚೆನ್ನೈ ಬಳಿಯ ಶ್ರೀಪೆರಂಬದೂರು ನಡುವೆ ಯೋಜಿಸಲಾಗಿದೆ. ಇದು ಹೊಸ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಿಂದ ಕೇವಲ 3 ಕಿ.ಮೀ. ದೂರದಲ್ಲಿರುವ ಪರಂದೂರಿನಲ್ಲಿ ಚೆನ್ನೈನ ಎರಡನೇ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಲಿದೆ.

ಪ್ರಸ್ತುತ, ಬೆಂಗಳೂರು ಮೂಲಕ ಮೈಸೂರು ಮತ್ತು ಚೆನ್ನೈ ನಡುವೆ ಸಂಪರ್ಕಿಸುವ ಅತ್ಯಂತ ವೇಗದ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ 6 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ಬುಲೆಟ್ ರೈಲು 2 ಗಂಟೆ 25 ನಿಮಿಷಗಳಲ್ಲಿ ಪ್ರಯಾಣ ಮುಗಿಸುತ್ತದೆ. ಬುಲೆಟ್ ರೈಲುಗಳು ಗಂಟೆಗೆ ಗರಿಷ್ಠ 350 ಕಿಮೀ ವೇಗದಲ್ಲಿ ಚಲಿಸುತ್ತವೆ ಮತ್ತು ಸರಾಸರಿ ವೇಗ ಗಂಟೆಗೆ 250 ಕಿಮೀ ಆಗುವ ಸಾಧ್ಯತೆಯಿದೆ, ಪ್ರತಿ ರೈಲು 750 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುತ್ತದೆ.

ಕೈಗಾರಿಕೆಗಳಿಗೆ ಉತ್ತೇಜನ

ಎಚ್‌ಎಸ್‌ಆರ್ ಯೋಜನೆಯು ಸಾವಿರಾರು ಜನರಿಗೆ, ವಿಶೇಷವಾಗಿ ವ್ಯಾಪಾರಿಗಳಿಗೆ, ಟೆಕ್ಕಿಗಳು ಮತ್ತು ಮೈಸೂರು, ಬೆಂಗಳೂರು ಮತ್ತು ಚೆನ್ನೈ ನಡುವೆ ಪ್ರಯಾಣಿಸುವ ಇತರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮತ್ತು ಆರಿನ್ ಕ್ಯಾಪಿಟಲ್‌ನ ಅಧ್ಯಕ್ಷ ಮೋಹನ್‌ದಾಸ್ ಪೈ ಅವರು ಸುದ್ದಿಸಂಸ್ಥೆ ಮನಿಕಂಟ್ರೋಲ್‌ಗೆ ತಿಳಿಸಿದ್ದಾರೆ. “ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಯೋಜನೆಯು ವ್ಯಾಪಾರದ ಪ್ರಯಾಣಕ್ಕೆ ಪ್ರಮುಖ ಉತ್ತೇಜನಕಾರಿಯಾಗಿದೆ. ವ್ಯಾಪಾರ ವ್ಯವಹಾರಗಳು ಮತ್ತು ಭೇಟಿಗಳು ಐದು ಪಟ್ಟು ಹೆಚ್ಚಾಗುತ್ತದೆ ಎಂದು ನಿರೀಕ್ಷಿಸುತ್ತೇನೆ ಎಂದರು.

ಎಚ್‌ಎಸ್‌ ರೈಲು ವಿಮಾನ ಪ್ರಯಾಣಿಕರನ್ನು ರೈಲುಗಳತ್ತ ಆಕರ್ಷಿಸಬಹುದು ಎಂದು ರೈಲ್ವೇ ತಜ್ಞರು ಹೇಳಿದ್ದಾರೆ. ಮೈಸೂರು-ಚೆನ್ನೈ ನಡುವಿನ ರೈಲ್ವೆ ಮಾರ್ಗದಲ್ಲಿ ಪ್ರಸ್ತುತ 490 ಕಿ.ಮೀ ದೂರವಿದ್ದು, ಬಂಗಾರಪೇಟೆ ಮಾರ್ಗವಾಗಿ ಸುಮಾರು 435 ಕಿ.ಮೀ ಹೊಂದಿದೆ. ಪ್ರಯಾಣದ ಅವಧಿ ಕಡಿಮೆಯಾಗಲಿದೆ. HSR ಟಿಕೆಟ್ ದರವು ಭಾರತೀಯ ರೈಲ್ವೇಯಲ್ಲಿನ ಪ್ರಥಮ ದರ್ಜೆಯ AC ದರಕ್ಕಿಂತ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಕರ್ನಾಟಕದ ರೈಲ್ವೇ ಕಾರ್ಯಕರ್ತ ಮತ್ತು ಎನ್‌ಜಿಒ ಸದಸ್ಯ ಕೆ.ಎನ್.ಕೃಷ್ಣ ಪ್ರಸಾದ್ ಹೇಳಿದ್ದಾಗಿ ವರದಿ ಮಾಡಿದೆ.

ಸದ್ಯ, ಯೋಜನೆ ಆರಂಭಕ್ಕೆ ಭೂ ಸ್ವಾಧೀನವೇ ಪ್ರಮುಖ ಸಮಸ್ಯೆ ಆಗಿದ್ದು, ಈ ಪ್ರಕ್ರಿಯೆ ಯಶಸ್ವಿಯಾದರೆ ಯೋಜನೆಯೂ ಆರಂಭವಾಗಲಿದೆ ಎಂದು ಮೋಹನ್​ದಾಸ್ ಪೈ ಹೇಳಿದರು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಇದು ಮೈಸೂರು ಮತ್ತು ಹತ್ತಿರದ ಜಿಲ್ಲೆಗಳಲ್ಲಿ ಪ್ರವಾಸೋದ್ಯಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಮತ್ತು ಹೋಟೆಲ್ ಉದ್ಯಮವನ್ನು ಸುಧಾರಿಸಿದೆ. ಉದ್ಯೋಗಿಯೊಬ್ಬರು ಮೈಸೂರಿನಲ್ಲಿ ಉಳಿಯಲು, ಬೆಂಗಳೂರಿನಲ್ಲಿ ಕೆಲಸ ಮಾಡಲು ಮತ್ತು ಕೆಲಸದ ನಂತರ ಮೈಸೂರಿಗೆ ಮರಳಲು ಸಾಧ್ಯವಾಗುತ್ತದೆ. ಬೆಂಗಳೂರು-ಚೆನ್ನೈ ಪ್ರದೇಶವು ಸಾಕಷ್ಟು ಕೈಗಾರಿಕೆಗಳು ಮತ್ತು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಯೋಜನೆಯನ್ನು ತ್ವರಿತಗೊಳಿಸಬೇಕು ಎಂದರು.

ಜರ್ಮನ್ ಮತ್ತು ಚೈನೀಸ್ ಅಧ್ಯಯನಗಳು

2016 ರಲ್ಲಿ, ಜರ್ಮನ್ ಇಂಜಿನಿಯರ್‌ಗಳ ತಂಡವು ಚೆನ್ನೈ-ಬೆಂಗಳೂರು-ಮೈಸೂರು ಕಾರಿಡಾರ್‌ಗಾಗಿ ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಿತ್ತು. 2018 ರಲ್ಲಿ ರೈಲ್ವೆಗೆ ಸಲ್ಲಿಸಿದ ವರದಿ ಪ್ರಕಾರ, 435-ಕಿಮೀ ಎಚ್‌ಎಸ್‌ಆರ್ ನೆಟ್‌ವರ್ಕ್‌ನ ಅಂದಾಜು ವೆಚ್ಚ ಸುಮಾರು 16 ಶತಕೋಟಿ (ಸುಮಾರು 1 ಲಕ್ಷ ಕೋಟಿ ರೂಪಾಯಿ) ಆಗಿದೆ.

ವರದಿಯ ಪ್ರಕಾರ, 435 ಕಿಲೋಮೀಟರ್‌ಗಳಲ್ಲಿ, ಟ್ರ್ಯಾಕ್‌ನ 84 ಪ್ರತಿಶತ ಮೇಲ್ಸೇತುವೆ, 11 ಪ್ರತಿಶತದಷ್ಟು ಅಂಡರ್​ಗ್ರೌಂಡ್ ಮತ್ತು ಉಳಿದ ಐದು ಪ್ರತಿಶತವು ಭೂಮಿ ಮೇಲೆ ಸಂಚರಿಸಲಿದೆ. (ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ) ನಿಧಿಯೊಂದಿಗೆ, ಜಪಾನ್‌ನ E5 ಶಿಂಕನ್‌ಸೆನ್ ಬುಲೆಟ್ ಟ್ರೈನ್ ತಂತ್ರಜ್ಞಾನವನ್ನು ಆಧರಿಸಿ HSR ಕಾರಿಡಾರ್‌ಗಳನ್ನು ಕಾರ್ಯಗತಗೊಳಿಸುವ ಸಾಧ್ಯತೆಯಿದೆ.

ಚೀನೀ ಸಂಸ್ಥೆಯ ಪ್ರಕಾರ, ಬೆಂಗಳೂರಿನ ಮೂಲಕ ಚೆನ್ನೈ ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು 4 ಗಂಟೆ 45 ನಿಮಿಷಗಳಿಗೆ ಕಡಿಮೆಗೊಳಿಸಬಹುದು ಮತ್ತು 4,350 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಪ್ರಸ್ತುತ ಇರುವ ಹಳಿಗಳನ್ನು 160 ಕಿಮೀ ವೇಗದಲ್ಲಿ ರೈಲುಗಳನ್ನು ಓಡಿಸಲು ಪರಿವರ್ತಿಸಬಹುದು.

ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾರಂಭವಾದ ನಂತರ, ನೈಋತ್ಯ ರೈಲ್ವೆ (ಕೆಎಸ್‌ಆರ್ ಬೆಂಗಳೂರು ಸಿಟಿ-ಜೋಲಾರ್‌ಪೇಟೆ ವಿಭಾಗ) ಮತ್ತು ದಕ್ಷಿಣ ರೈಲ್ವೆ (ಜೋಲಾರ್‌ಪೇಟೆ-ಚೆನ್ನೈ ವಿಭಾಗ) ಎರಡೂ ಗರಿಷ್ಠ ಅನುಮತಿಸುವ ವೇಗವನ್ನು ಗಂಟೆಗೆ 110 ಕಿಲೋಮೀಟರ್‌ನಿಂದ 130 ಕಿಮೀಗೆ ಹೆಚ್ಚಿಸಲು ಕೆಲಸ ಮಾಡುತ್ತಿವೆ. ಹಳಿಗಳನ್ನು 130-160 kmph ಗೆ ಏರಿಸಿದ ನಂತರ, ರೈಲುಗಳು ಸರಾಸರಿ 110-120 kmph ವೇಗದಲ್ಲಿ ಚಲಿಸಬಹುದು. ಕಳೆದ ವರ್ಷ, ನೈಋತ್ಯ ರೈಲ್ವೆಯು KSR ಬೆಂಗಳೂರು ನಗರ-ಜೋಲಾರ್‌ಪೇಟೆ ಮಾರ್ಗದಲ್ಲಿ ಗರಿಷ್ಠ ಅನುಮತಿಸುವ ವೇಗವನ್ನು 110 kmph ನಿಂದ 130 kmph ಗೆ ಹೆಚ್ಚಿಸಲು ವೇಗ ಪ್ರಯೋಗವನ್ನು ನಡೆಸಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದರು.

ಇತರೆ ಹೈ ಸ್ಪೀಡ್ ರೈಲು ಯೋಜನೆಗಳು

ಮುಂಬೈ-ಅಹಮದಾಬಾದ್ ಎಚ್‌ಎಸ್‌ಆರ್ ಯೋಜನೆಯು ಜಪಾನ್ ಸರ್ಕಾರದ ತಾಂತ್ರಿಕ ಮತ್ತು ಆರ್ಥಿಕ ನೆರವಿನೊಂದಿಗೆ ಅನುಷ್ಠಾನಗೊಳ್ಳುತ್ತಿರುವ ದೇಶದ ಏಕೈಕ ಮಂಜೂರಾದ ಯೋಜನೆಯಾಗಿದೆ ಎಂದು ಎನ್‌ಎಚ್‌ಎಸ್‌ಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಏಳು ಎಚ್‌ಎಸ್‌ಆರ್ ಕಾರಿಡಾರ್‌ಗಳಿಗಾಗಿ ಸಮೀಕ್ಷೆಗಳು ಮತ್ತು ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ. ಅವುಗಳೆಂದರೆ, ದೆಹಲಿ-ವಾರಣಾಸಿ, ದೆಹಲಿ-ಅಹಮದಾಬಾದ್, ಮುಂಬೈ-ನಾಗ್ಪುರ, ಮುಂಬೈ-ಹೈದರಾಬಾದ್, ಚೆನ್ನೈ-ಬೆಂಗಳೂರು-ಮೈಸೂರು, ದೆಹಲಿ-ಚಂಡೀಗಢ-ಅಮೃತಸರ, ಮತ್ತು ವಾರಣಾಸಿ-ಹೌರಾ.

ಕೇಂದ್ರದ ರಾಷ್ಟ್ರೀಯ ರೈಲು ಯೋಜನೆ (ಎನ್‌ಆರ್‌ಪಿ) ಪ್ರಕಾರ, ಮುಂಬೈ-ಹೈದರಾಬಾದ್ ಎಚ್‌ಎಸ್‌ಆರ್ ಅನ್ನು ಹೈದರಾಬಾದ್‌ನಿಂದ ಬೆಂಗಳೂರಿಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. NRP ಪ್ರಕಾರ, ಹೈದರಾಬಾದ್ 2041 ರ ವೇಳೆಗೆ ಬೆಂಗಳೂರಿಗೆ ಬುಲೆಟ್ ರೈಲು ಸಂಪರ್ಕವನ್ನು ಹೊಂದುವ ನಿರೀಕ್ಷೆಯಿದೆ. ಚೆನ್ನೈ-ಬೆಂಗಳೂರು-ಮೈಸೂರು HSR ಅನ್ನು 2051 ಕ್ಕೆ ಯೋಜಿಸಲಾಗಿದೆ. ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಿದ ನಂತರ, ಯೋಜನೆಯು ವೇಗವನ್ನು ಪಡೆಯುವ ಸಾಧ್ಯತೆಯಿದೆ.

Related Articles

Leave a Reply

Your email address will not be published. Required fields are marked *

Back to top button