
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯನ್ನು (Greater Bengaluru Governance Bill 2024) ರಾಜ್ಯಪಾಲರು ಅಂಕಿತ ಹಾಕದೇ ವಾಪಸ್ ಕಳುಹಿಸಿದ್ದಾರೆ. BBMP ವಿಭಜನೆ ಮಾಡುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ವಿರೋಧದ ನಡುವೆ ರಾಜ್ಯ ಸರ್ಕಾರ ಬಿಲ್ ಪಾಸ್ ಮಾಡಿಕೊಂಡಿತ್ತು. ಆದ್ರೆ, ಇದೀಗ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ (governor thawar chand gehlot) ಅವರು ಗ್ರೇಟರ್ ಬೆಂಗಳೂರು ವಿಧೇಯಕವನ್ನು ವಾಪಸ್ ಕಳುಹಿಸಿದ್ದಾರೆ. ಇದರಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಅಲ್ಲದೇ ರಾಜಭವನ ಮತ್ತು ಸರಕಾರದ ನಡುವಿನ ಸಂಘರ್ಷದ ಮತ್ತೊಂದು ಅಧ್ಯಾಯ ಆರಂಭವಾದಂತಾಗಿದೆ.ಬಿಬಿಎಂಪಿ ವಿಭಜನೆ ಮಾಡಿ ಬೆಂಗಳೂರು ನಗರ ವಿಸ್ತೀರ್ಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಜಾರಿಗೆ ಮುಂದಾಗಿತ್ತು. ಬಜೆಟ್ ಅಧಿವೇಶನದಲ್ಲಿ ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಈ ಮಸೂದೆ ಅಂಗೀಕಾರವಾಗಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಸದ್ಯ ರಾಜ್ಯಪಾಲರು ಅಂಕಿತ ಹಾಕಲು ನಿರಾಕರಿಸಿ ಬಿಲ್ ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ವಿಪಕ್ಷಗಳ ಮನವಿಯನ್ನು ರಾಜ್ಯಪಾಲರು ಪುರಸ್ಕರಿಸಿದ್ದಾರೆ.ವಿಪಕ್ಷಗಳ ವಿರೋಧದ ನಡುವೆಯೂ ವಿಧಾನಸಭೆ ಹಾಗೂ ವಿಧಾನಪತಿಷತ್ನಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಪಾಸ್ ಮಾಡಿಕೊಂಡು ರಾಜ್ಯಪಾಲರಿಗೆ ಅಂಕಿತಕ್ಕೆ ಕಳುಹಿಸಿಲಾಗಿತ್ತು. ಮತ್ತೊಂದೆಡೆ ಯಾವುದೇ ಕಾರಣಕ್ಕೂ ಗ್ರೇಟರ್ ಬೆಂಗಳೂರು ಬಿಲ್ಗೆ ಒಪ್ಪಿಗೆ ನೀಡಬೇಡಿ ಎಂದು ಬಿಜೆಪಿ ಹಾಗೂ ಜೆಡಿಎಸ್ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಇದೀಗ ರಾಜ್ಯಪಾಲರು ಗ್ರೇಟರ್ ಬೆಂಗಳೂರು ಮಸೂಧೆಯನ್ನು ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ವಿಪಕ್ಷಗಳು ಮೇಲುಗೈ ಸಾಧಿಸಿವೆ.