ಕಲ್ಲು ಎಸೆದವರು 14, 15 ವರ್ಷದ ಹುಡುಗರು, ಪೊಲೀಸರದ್ದು ತಪ್ಪಿಲ್ಲ, ಡಿಕೆ ಶಿವಕುಮಾರ್

ಯಾರು ಏನು ಹೇಳಿದರು ಎಂಬುದು ಮುಖ್ಯವಲ್ಲ. ನಾನು ಉಪಮುಖ್ಯಮಂತ್ರಿಯಾಗಿ ಹೇಳುತ್ತಿದ್ದೇನೆ, ಉದಯಗಿರಿ ಗಲಭೆ (Udayagiri riots) ಪೊಲೀಸರದ್ದು ಯಾವುದೇ ತಪ್ಪಿಲ್ಲ. ಪೊಲೀಸರು ಸರಿಯಾಗಿ ಕೆಲಸ ಮಾಡಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಪೊಲೀಸರು ಗಾಯಗೊಂಡರೂ ಸಮಯ ಪ್ರಜ್ಞೆಯಿಂದ ಕೆಲಸ ಮಾಡಿದ್ದಾರೆ. ನಾನು ನಮ್ಮ ಪೊಲೀಸರ ಪರವಾಗಿಯೇ ಇದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು.ಉದಯಗಿರಿ ಗಲಭೆಗೆ ಪೊಲೀಸರ ಕರ್ತವ್ಯಲೋಪ ಕಾರಣ ಎಂಬ ಸಚಿವ ಕೆಎಸ್ ರಾಜಣ್ಣ ಹೇಳಿಕೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ರಾಜಣ್ಣ ಅವರ ಮಾತಿಗೆ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಾರೆ. 8-10 ದಿನದಲ್ಲಿ ಮುಖ್ಯಮಂತ್ರಿಗಳೇ ಪ್ರತಿಕ್ರಿಯೆ ಕೊಡುತ್ತಾರೆ. ಮೈಸೂರಿನ ನೆಲದಲ್ಲಿ ನಿಂತು ಹೇಳ್ತಿದ್ದೇನೆ, ಪೊಲೀಸರದ್ದು ತಪ್ಪಿಲ್ಲ. ಎಲ್ಲಾ ಮಾಹಿತಿ ಪಡೆದಿದ್ದೇನೆ, ಪೊಲೀಸರು ಅನಾಹುತ ತಪ್ಪಿಸಿದ್ದಾರೆ ಎಂದರು.
ಕಲ್ಲು ಎಸೆದಿರುವವರೆಲ್ಲರೂ 14, 15 ವರ್ಷದ ಹುಡುಗರು. ಮುಖಂಡರ ಮಾತನ್ನೂ ಅವರು ಕೇಳಿಲ್ಲ. ಹಿರಿಯರು ಮತ್ತು ಮುಖಂಡರೂ ಸೇರಿ ಗಲಭೆ ಕಂಟ್ರೋಲ್ ಮಾಡಿದ್ದಾರೆ. ಪೊಲೀಸರಿಗಾದರೆ ಪ್ರೊಟೆಕ್ಷನ್ ಇತ್ತು, ಅಲ್ಲಿದ್ದ ಜನರಿಗೆ ಇರಲಿಲ್ಲ. ಪೊಲೀಸರು ಗಲಭೆ ಮಾಡಿದವರ ಪತ್ತೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಅರೆಸ್ಟ್ ಮಾಡುತ್ತಾರೆ ಎಂದು ಹೇಳಿದರು.