ಗ್ಯಾರಂಟಿ ಸರ್ಕಾರಕ್ಕೆ 100 ದಿನ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೂರು ದಿನಗಳನ್ನು ಪೂರೈಸಿದ್ದು, ‘ಗ್ಯಾರಂಟಿ ಸರ್ಕಾರಕ್ಕೆ 100 ದಿನ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಸ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ” 100 ದಿನಗಳು” ಪೂರೈಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಡಿನ ಮತದಾರರು ನಮ್ಮ ಮೇಲೆ ನಂಬಿಕೆ ಮತ್ತು ಭರವಸೆಯನ್ನಿಟ್ಟು 135 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಪೂರ್ಣ ಬಹುಮತದ ಸುಭದ್ರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಜನರು ನೀಡಿರುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಅವರ ನಿರೀಕ್ಷೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ.
ಗ್ಯಾರಂಟಿ ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಜೊತೆಜೊತೆಗೆ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು, ಕನಕದಾಸರು, ನಾರಾಯಣ ಗುರು ಮುಂತಾದ ದಾರ್ಶನಿಕರು ತೋರಿದ ಸಮಾನತೆಯ ಹಾದಿಯಲ್ಲಿ ನಾಡನ್ನು ಮುನ್ನಡಿಸಿಕೊಂಡು ಹೋಗುತ್ತಿದ್ದೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸರ್ಕಾರದ ಕಾರ್ಯಕ್ರಮಗಳ ಮೂಲಕ ತಲುಪಬೇಕೆಂಬ ಆಶಯದೊಂದಿಗೆ ಆರಂಭಿಸಿರುವ ನಮ್ಮ ಪಯಣಕ್ಕಿಂದು ಶತಕ ಸಂಭ್ರಮ.
ನಮ್ಮ ಮೊದಲ ‘100 ದಿನಗಳ’ ಆಡಳಿತದಲ್ಲಿ ನುಡಿದಂತೆ ನಡೆಯುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ. ಗ್ಯಾರಂಟಿಗಳ ಈಡೇರಿಕೆಯ ಜೊತೆಗೆ ಅಭಿವೃದ್ಧಿಯ ರಥವನ್ನು ಮುನ್ನಡೆಸುತ್ತಿರುವ ನಮ್ಮೊಂದಿಗೆ ನಿಮ್ಮೆಲ್ಲರ ಸಹಕಾರವಿರಲಿ ಎಂದು ತಿಳಿಸಿದ್ದಾರೆ.
ನಾಡಿನ ಮಹಿಳೆಯರು ಶಿಕ್ಷಣ, ಉದ್ಯೋಗ ಸಂಬಂಧಿತ ಪ್ರಯಾಣಗಳಿಗೆ ಯಾರ ಮೇಲೆಯೂ ಅವಲಂಬಿತರಾಗದೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂಬ ಸದಾಶಯದೊಂದಿಗೆ ಜಾರಿಗೆ ತಂದಿರುವ “ಶಕ್ತಿ” ಯೋಜನೆಯಡಿ ನಿತ್ಯ 50 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ತಮ್ಮ ಕೆಲಸ ಕಾರ್ಯ ನಿಮಿತ್ತ ಉಚಿತವಾಗಿ ಸಂಚರಿಸುತ್ತಿದ್ದಾರೆ. ಯೋಜನೆ ಜಾರಿಯಾದ ದಿನದಿಂದ ಈ ವರೆಗೆ ಸುಮಾರು 43 ಕೋಟಿ (ಒಟ್ಟು ಪ್ರಯಾಣ ಸಂಖ್ಯೆ) ಮಂದಿ ಉಚಿತ ಪ್ರಯಾಣ ನಡೆಸಿದ್ದು, ಒಟ್ಟು ಟಿಕೆಟ್ ಮೌಲ್ಯ 1,000 ಕೋಟಿ ರೂಪಾಯಿ ದಾಟಿದೆ.
ನಾಡಿನ ಮಹಿಳೆಯರಿಂದ ವ್ಯಕ್ತವಾಗುತ್ತಿರುವ ಪ್ರಶಂಸೆಯ ಮಾತುಗಳು ಯೋಜನೆಯ ಸಫಲತೆಗೆ ಹಿಡಿದ ಕನ್ನಡಿಯಂತಿದೆ. ನಮ್ಮ ಮೊದಲ ‘100 ದಿನಗಳ’ ಆಡಳಿತದಲ್ಲಿ ನುಡಿದಂತೆ ನಡೆಯುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ.ಗ್ಯಾರಂಟಿಗಳ ಈಡೇರಿಕೆಯ ಜೊತೆಗೆ ಅಭಿವೃದ್ಧಿಯ ರಥವನ್ನು ಮುನ್ನಡೆಸುತ್ತಿರುವ ನಮ್ಮೊಂದಿಗೆ ನಿಮ್ಮೆಲ್ಲರ ಸಹಕಾರವಿರಲಿ.