ಕ್ಯಾತನಹಳ್ಳಿ ಗ್ರಾಮದ ಕೂಲಿ ಕಾರ್ಮಿಕರಿಂದ ಪ್ರತಿಭಟನೆ.
ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಂದಗೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕ್ಯಾತನಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ನಾನಾ ಕೆಲಸಗಳನ್ನು ಮಾಡಿರುವ ಕೂಲಿ ಕಾರ್ಮಿಕರಿಗೆ ಕೂಲಿ ಹಣ ನೀಡದೆ. ಎನ್.ಎಂ.ಆರ್ ನಲ್ಲೂ ಕೂಲಿ ಹಣವನ್ನು ಜೀರೋ ಮಾಡಿದ್ದಾರೆ ಎಂದು ಆರೋಪಿಸಿ ಕ್ಯಾತನಹಳ್ಳಿ ಗ್ರಾಮದ 50ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆ.ಆರ್.ಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜಗದೀಶ್ ಮಾತನಾಡಿ ಮಹತ್ವಕಾಂಕ್ಷೆ ಯೋಜನೆಯಾದ ನರೇಗಾ ಯೋಜನೆಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ನಮ್ಮ ಗ್ರಾಮದ 89 ಕಾರ್ಮಿಕರು ಕೆಲಸ ಮಾಡಿದ್ದಾರೆ. ಕೆಲಸ ಮಾಡಿದ ಎನ್.ಎಂ.ಆರ್ ನಲ್ಲೂ ಕೂಲಿ ಹಣವನ್ನು ಜೀರೋ ಎಂದು ಉದ್ದೇಶ ಪೂರಕವಾಗಿ ನಮೂದಿಸಿದ್ದಾರೆ ಹಾಗೂ ಒಂದು ವಾರದಿಂದ ನಮ್ಮ ಗ್ರಾಮದ ಕಾರ್ಮಿಕರಿಗೆ ಕೆಲಸ ನೀಡಿಲ್ಲ ಎಂದು ಆರೋಪಿಸಿ ಕೂಡಲೇ ಕೂಲಿ ಕಾರ್ಮಿಕರಿಗೆ ಹಣ ನೀಡುವಂತೆ ಒತ್ತಾಯಿಸಿದರು. ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಪರದಾಡುವಂತಾಗಿದೆ. ಸ್ಥಳೀಯ ಪಿಡಿಒ ಹಾಗೂ ಇಂಜಿನಿಯರ್ ಅವರ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯದಿಂದ ಕೂಲಿ ಪಾವತಿಯಾಗುತ್ತಿಲ್ಲ ಎಂದು ಆರೋಪಿಸಿದರು.ಸಮಸ್ಯೆಗಳ ಈಡೇರಿಕೆಗಾಗಿ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಲಿ ಮಾಡುವ ಗ್ರಾಮೀಣ ಮಹಿಳೆಯರು ಕಚೇರಿಗಳಿಗೆ ಅಲೆದಾಡಿ ಸಾಕಾಗಿದೆ.ನಮ್ಮ ಕೂಲಿ ಹಣ ನೀಡುವವರೆಗೂ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರ ಸಮಸ್ಯೆ ಆಲಿಸಿದ ತಾ.ಪಂ ಸಹಾಯಕ ನಿರ್ದೇಶಕ ಉಮಾಶಂಕರ್ ಕೂಲಿ ಕಾರ್ಮಿಕರ ಸಮಸ್ಯೆಗಳ ಈಡೇರಿಕೆಗೆ ಬುಧವಾರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ಕ್ಯಾತನಹಳ್ಳಿ ಗ್ರಾಮದಿಂದ ಆಗಮಿಸಿದ್ದ ಕೂಲಿ ಕಾರ್ಮಿಕರು ತಾ.ಪಂ.ಕಾರ್ಯನಿರ್ವಾಹಣ ಅಧಿಕಾರಿ ಹಾಗೂ ಮಂದಗೆರೆ ಪಿಡಿಓ ನರೇಗಾ ಯೋಜನೆ ಇಂಜಿನಿಯರ್ ಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಶಿವರಾಜು, ಜವರೇಗೌಡ, ಶಿವಯ್ಯ, ಮಹಾದೇವ, ಅವಿನಾಶ, ರಾಜಯ್ಯ,ಚಂದ್ರಚಾರಿ, ಸೋಮಶೇಖರ್, ಪುಟ್ಟರಾಜು,ಉದೇಶ, ಜಯಲಕ್ಷ್ಮಿ, ವಸಂತ, ರೇಖಾ, ಚಂದ್ರಮ್ಮ, ಕಾಳಯ್ಯ, ಹೇಮಾವತಿ, ಶಿವಕುಮಾರಿ, ಪುಟ್ಟತಾಯಿ, ಜಯಲಕ್ಷ್ಮಿ,ಮೀನಾಕ್ಷಿ, ಕಾಂತಮ್ಮ, ರಂಜಿತ, ಕೆಂಪಮ್ಮ, ಪುಟಮ್ಮ, ಸುಮಿತ್ರಾ, ಕುಮಾರಿ, ತಮ್ಮಯ್ಯ, ಲಕ್ಷ್ಮಿ, ಸೇರಿದಂತೆ ಇತರರು ಭಾಗವಹಿಸಿದ್ದರು.