ಕೋರ್ಟ್ ಆವರಣದಲ್ಲೇ ಗುಂಡಿನ ದಾಳಿ ಬಿಜೆಪಿ ಮಾಜಿ ಶಾಸಕನ ತಮ್ಮನ ಹತ್ಯೆ!
ಪಾಟ್ನಾ: ವಿಚಾರಣಾಧೀನ ಕೈದಿಯೊಬ್ಬನನ್ನ ಕೋರ್ಟ್ ಆವರಣದಲ್ಲೇ ಗುಂಡಿಕ್ಕಿ ಕೊಂದಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ. ಪಾಟ್ನಾದ ದಾನಪುರ ಕೋರ್ಟ್ ಕ್ಯಾಂಪಸ್ನಲ್ಲಿ ಬೇರ್ ಜೈಲಿನಿಂದ ವಿಚಾರಣೆಗೆ ಕರೆತಂದಿದ್ದ ಕೈದಿಯನ್ನು ಹತ್ಯೆ ಮಾಡಲಾಗಿದೆ. ನಂತರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಪ್ರಾಥಮಿಕ ಮಾಹಿತಿಯಲ್ಲಿ ಕೊಲೆಯಾದ ವ್ಯಕ್ತಿಯನ್ನ ಅಭಿಷೇಕ್ ಕುಮಾರ್ ಅಲಿಯಾಸ್ ಛೋಟೆ ಸರ್ಕಾರ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೋರ್ಟ್ ಹಾಜರುಪಡಿಸಲು ಬಂದಾಗ ಹತ್ಯೆ
ದಾನಪುರ ಕೋರ್ಟ್ ಆವರಣದಲ್ಲಿ ಹತ್ಯೆಗೀಡಾದ ಯುವಕ ಬಿಜೆಪಿ ಮಾಜಿ ಶಾಸಕ ಚಿತ್ತರಂಜನ್ ಶರ್ಮಾ ಸಹೋದರನನ್ನು ಕೊಲೆ ಮಾಡಿದ್ದ ಆರೋಪಿ ಎಂದು ತಿಳಿದುಬಂದಿದೆ. ಕೊಲೆ ಆರೋಪದ ಮೇಲೆ ಜೈಲಿನಲ್ಲಿದ್ದ ಈತನನ್ನು ಪಾತಕಿಗಳು ಬಿಗಿ ಬಂದೋಬಸ್ತ್ ನಡುವೆಯೂ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಪೊಲೀಸರ ವಿಶೇಷ ತಂಡ ಆರೋಪಿಯನ್ನ ದಾನಪುರ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದುಕೊಂಡು ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಇಬ್ಬರ ಬಂಧನ
ಇನ್ನು ಛೋಟೆ ಸರ್ಕಾರ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬರನ್ನು ವಿಚಾರಣೆಗೆ ಒಳಪಡಿಸಿದ್ದು, ಅಧಿಕಾರಿಗಳು ಪ್ರಕರಣದ ಸಂಬಂಧ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಈ ದೃಶ್ಯ ಅಕ್ಕಪಕ್ಕದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅಲ್ಲದೆ ಸ್ಥಳದಲ್ಲಿ ನಾಲ್ಕು ಬುಲೆಟ್ ಸೆಲ್ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಛೋಟೆ ಸರ್ಕಾರ್ ವಿರುದ್ಧ 16 ಪ್ರಕರಣ
ರಾಜಧಾನಿ ಪಾಟ್ನಾದ ಸುತ್ತಮುತ್ತಲಿನ ಹಲವು ಪೊಲೀಸ್ ಠಾಣೆಗಳಲ್ಲಿ ಛೋಟೆ ಸರ್ಕಾರ್ ವಿರುದ್ಧ 16 ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗುತ್ತಿದೆ. ಛೋಟೆ ಸರ್ಕಾರ್ನನ್ನ ಪೊಲೀಸರು ಜುಲೈ 3, 2022 ರಂದು ಬಂಧಿಸಿ ಪಾಟ್ನಾದ ಬ್ಯೂರ್ ಜೈಲಿಗೆ ಕಳುಹಿಸಿದ್ದರು. ಅಂದಿನಿಂದ ಛೋಟೆ ಸರ್ಕಾರ್ ಪಾಟ್ನಾದ ಬೇರ್ ಜೈಲಿನಲ್ಲಿದ್ದ. ಶುಕ್ರವಾರ, ಖೈದಿಯನ್ನು ಪಾಟ್ನಾದ ಬ್ಯೂರ್ ಜೈಲಿನಿಂದ ದಾನಪುರದ ಎಡಿಜಿ 1 ಮತ್ತು 3 ರ ಮುಂದೆ ಹಾಜರುಪಡಿಸಲು ದಾನಪುರದ ನ್ಯಾಯಾಲಯಕ್ಕೆ ವಾಹನದ ಮೂಲಕ ಕಳುಹಿಸಲಾಗಿತ್ತು. ಛೋಟೆ ಸರ್ಕಾರ್ ಶುಕ್ರವಾರ ಮಧ್ಯಾಹ್ನ ದಾನಪುರ ಸಿವಿಲ್ ಕೋರ್ಟ್ ತಲುಪಿದ ತಕ್ಷಣ. ಮೊದಲೇ ಹೊಂಚು ಹಾಕಿ ಕುಳಿತಿದ್ದ ಇಬ್ಬರು ಕ್ರಿಮಿನಲ್ಗಳು ಛೋಟೆ ಸರ್ಕಾರ್ನ ಮೇಲೆ ಹಲವು ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ.
ಕೋರ್ಟ್ ಆವರಣದಲ್ಲಿ ಹತ್ಯೆ ನಡೆಯುತ್ತಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆ ಛೋಟ ಸರ್ಕಾರ್ ಹತ್ಯೆ ಮಾದರಿಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಕರೆತಂದಿದ್ದ ಆರೋಪಿಯನ್ನ ಇದೇ ಹತ್ಯೆ ಮಾಡಲಾಗುತ್ತು. ಬಿಹ್ತಾ ಸಿನಿಮಾ ಹಾಲ್ ಮಾಲೀಕ ನಿರ್ಭಯ್ ಸಿಂಗ್ ಹತ್ಯೆ ಪ್ರಕರಣದ ವಿಚಾರಣೆಯ ದಿನ ಆ ಘಟನೆ ನಡೆದಿತ್ತು.