ಕೊಡಚಾದ್ರಿ ಕಾಲೇಜಿನಲ್ಲಿ ಭ್ರಷ್ಟಾಚಾರ ತಡೆ ಕುರಿತು ಜಾಗೃತಿ ಕಾರ್ಯಕ್ರಮ
ಹೊಸನಗರ: ಭ್ರಷ್ಟಾಚಾರ ತಡೆ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಲೋಕಾಯುಕ್ತ ಪೊಲೀಸ್ ಸಿಪಿಐ ಸುರೇಶ್ ತಿಳಿಸಿದರು
ಭ್ರಷ್ಟಾಚಾರ ವಿರೋಧಿ ಜಾಗೃತಿ ಅರಿವು ಸಪ್ತಾಹ ಅಂಗವಾಗಿ ಲೋಕಾಯುಕ್ತ ಸಂಸ್ಥೆ ಇಲ್ಲಿನ ಕೊಡಚಾದ್ರಿ ಸರ್ಕಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ ನಿರ್ಮೂಲನೆಗೆ ಸರ್ಕಾರ, ಜನತೆ, ಸಂಘಸಂಸ್ಥೆಗಳು ಒಟ್ಟಾಗಿ ಕೈ ಜೋಡಿಸಬೇಕಿದೆ ಎಂದರು.
ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರ ಅಡ್ಡಿಯಾಗಿದ್ದು, ಅಧಿಕಾರಿಗಳು ಸಾರ್ವಜನಿಕರಿಗೆ ಪಾರದರ್ಶಕವಾಗಿ ಸೇವೆ ಸಲ್ಲಿಸಬೇಕಿದೆ ಎಂದ ಅವರು, ಜನತೆ ಸರ್ಕಾರಿ ಕಚೇರಿಗಳಿಗೆ ಅಲೆದಾಟ ಮಾಡುವುದನ್ನು ತಪ್ಪಿಸಬೇಕು. ಹಣ ಮತ್ತಿತರ ಬೇಡಿಕೆ ಇಡದೇ ಸರ್ಕಾರ ನೀಡುವ ವೇತನಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಇದರಿಂದ ಸಮಾಜದಲ್ಲಿ ಅಧಿಕಾರಿ ವರ್ಗದ ಮೇಲೆ ಗೌರವ ಹೆಚ್ಚುವುದು ಎಂದರು.
ತಹಶೀಲ್ದಾರ್ ರಶ್ಮಿ, ಪ್ರಾಂಶುಪಾಲ ಉಮೇಶ್, ಎನ್ ಎಸ್ ಎಸ್ ಅಧಿಕಾರಿ ಪ್ರದೀಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.