ಕೈ ಶಾಸಕಾಂಗ ಸಭೆಯಲ್ಲಿ ಶಾಸಕರಿಂದ ಆರೋಪಗಳ ಸುರಿಮಳೆ, ಪರಸ್ಪರ ಕಿತ್ತಾಡಿಕೊಂಡ ಸಚಿವದ್ವಯರು..!

ಕಾಂಗ್ರೆಸ್ ಪಾಳಯದಲ್ಲಿ ಯಾಕೋ ಕೆಮೆಸ್ಟ್ರಿ ಪ್ರಾಬ್ಲಂ ಶುರುವಾಗಿದೆ. ಶಾಸಕರೆಂದರೆ ಸಚಿವರಿಗೆ ಲೆಕ್ಕಕ್ಕಿಲ್ಲ, ಸಚಿವರೆಂದರೆ ಶಾಸಕರಿಗೆ ಆಗುತ್ತಿಲ್ಲ. ಯಾವ ಮಟ್ಟಿಗೆ ಅಂದ್ರೆ ಶಾಸಕರು ಸಚಿವರು ಪರಸ್ಪರ ಕಿತ್ತಾಡಿಕೊಳ್ಳುವ ಮಟ್ಟಕ್ಕೆ ಹೋಗಿದ್ದು, ಈ ಸಂಬಂಧ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತ ಕಿತ್ತಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ದಾಖಲೆಯ ಮಟ್ಟದಲ್ಲಿ ಹದಿನಾರನೇ ಬಾರಿಗೆ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ನಿನ್ನೆ(ಮಾರ್ಚ್ 10) ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದಾರೆ. ಬಜೆಟ್ ವಿಷಯದಲ್ಲಿ ವಿರೋಧ ಪಕ್ಷಗಳನ್ನು ಎದುರಿಸಲು ತಯಾರಿ ಮಾಡಬೇಕಿದ್ದ ಶಾಸಕಾಂಗ ಸಭೆಯಲ್ಲಿ ಸಚಿವರು ಹಾಗೂ ಶಾಸಕರು ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಗಳ ದೊಡ್ಡ ಸಮರವೇ ನಡೆದು ಹೋಗಿದೆ. ಹೌದು… ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಚಿವರು ಕೈಗೆ ಸಿಗುತ್ತಿಲ್ಲವೆಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಿನ್ನೆ(ಮಾರ್ಚ್ 10) ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಚಿವರು ಕೈಗೆ ಸಿಗುತ್ತಿಲ್ಲವೆಂದು ಶಾಸಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ರಚನೆಯಾಗಿ ಎರಡು ವರ್ಷಗಳಾಗಿವೆ, ಇನ್ನೂ ಶಾಸಕರಿಗೆ ಸಚಿವರು ಸಿಗುತ್ತಲೇ ಇಲ್ಲ, ಭೇಟಿಗೆ ಯತ್ನಿಸಿದರೂ ಏನಾದರೊಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರಗಳ ಕೆಲಸಗಳ ನಿಮಿತ್ತ ಸಚಿವರ ಸಂಪರ್ಕಕ್ಕೆ ಯತ್ನಿಸಿದರೂ ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕಿದರೂ ಕೆಲಸಗಳನ್ನ ಮಾಡಿಕೊಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಲ್ಲವೇ ಇಲ್ಲಸಲ್ಲದ ಕಾರಣಗಳನ್ನ ನೀಡಿ ನಮ್ಮನ್ನ ಸಾಗ ಹಾಕಲು ನೋಡುತ್ತಾರೆ. ಇದು ಹೀಗೆ ಆದರೆ ಸಚಿವರಾಗಿ ಯಾಕೆ ಇರಬೇಕು? ಸ್ಪಂದಿಸದ ಸಚಿವರನ್ನ ಮುಂದುವರೆಸುವ ಅಗತ್ಯ ಏನಿದೆ? ಮೊದಲು ತಮ್ಮ ನಡೆ ಬದಲಾಯಿಸಿಕೊಳ್ಳದ ಸಚಿವರನ್ನ ಸಂಪುಟದಿಂದ ಕೈಬಿಡಿ ಎಂಬ ಒತ್ತಾಯ ಕೇಳಿ ಬಂದಿದೆ.ಇದೇ ವೇಳೆ ಕೌನ್ಸೆಲಿಂಗ್ ಮೂಲಕ ನಡೆಸುವ ವರ್ಗಾವಣೆ ಪ್ರಕ್ರಿಯೆಯನ್ನ ಕೈಬಿಡುವಂತೆ ಒತ್ತಾಯ ಮಾಡಿದ್ದಾರೆ ಕೈ ಶಾಸಕರು. ಉಪನೋಂದಣಾಧಿಕಾರಿ ಹಾಗೂ ಪಿಡಿಒಗಳ ವರ್ಗಾವಣೆಯನ್ನ ಕೌನ್ಸಲಿಂಗ್ ಮೂಲಕ ಆರಂಭಿಸಲಾಗಿದೆ, ಇದರಿಂದ ನಮಗೆ ಕ್ಷೇತ್ರಗಳಲ್ಲಿ ತೀವ್ರ ಸಮಸ್ಯೆಯಾಗಿದೆ. ತಮಗೆ ಬೇಕಾದವರನ್ನ ವರ್ಗಾವಣೆ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಕೌನ್ಸಲಿಂಗ್ ಮೂಲಕ ವರ್ಗಾವಣೆ ಆಗುವವರು ತಮ್ಮ ಮಾತನ್ನ ಸರಿಯಾಗಿ ಕೇಳೋದೆ ಇಲ್ಲನಮಗೆ ಬೇಕಾದವರನ್ನ ಹಾಕಿಸಿಕೊಳ್ಳಲು ಕೌನ್ಸಲಿಂಗ್ ಪ್ರಕ್ರಿಯೆ ನಿಲ್ಲಿಸಿ ಎಂದು ಸಿಎಂಗೆ ದುಂಬಾಲು ಬಿದ್ದಿದ್ದಾರೆ.ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹಾಗೂ ಸಚಿವ ಎನ್ ಎಸ್ ಭೋಸರಾಜು ನಡುವೆಯೇ ಕಿತ್ತಾಟ ನಡೆದಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹಿರಂಗವಾಗಿಯೇ ಸಚಿವರಿಬ್ಬರೂ ಕಿತ್ತಾಟ ನಡೆಸಿದ ಘಟನೆ ಭಾರೀ ಮುಜುಗರ ಉಂಟು ಮಾಡಿದೆ. ಬಿಜೆಪಿ ಶಾಸಕರಿಗೂ ಅನುಕೂಲ ಆಗುವಂತೆ ಸಚಿವರು ನಡೆದುಕೊಳ್ತಿದ್ದಾರೆ ಎಂದು ಶರಣ ಪ್ರಕಾಶ್ ಪಾಟೀಲ್ ಹಾಗೂ ಭೋಸರಾಜು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ ಕಿತ್ತಾಟ ನಡೆಸಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಬಳಿಕ ಇಬ್ಬರು ಸಚಿವರ ನಡುವೆ ಜಟಾಪಟಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.ರಾಯಚೂರು ವರ್ಗಾವಣೆ ವಿಚಾರಕ್ಕೆ ಸಚಿವ ಬೋಸರಾಜು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಯಚೂರು ಹಿಡಿತ ಸಾಧಿಸುವ ಸಲುವಾಗಿ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಬೋಸರಾಜು, ನಾನು ರಾಯಚೂರು ಜಿಲ್ಲೆಯವನು. ವರ್ಗಾವಣೆ ವಿಚಾರಕ್ಕೆ ಯಾಕೆ ಪತ್ರ ನೀಡುತ್ತೀರಾ ಎಂದು ಬೋಸರಾಜು ಆಕ್ಷೇಪಿಸಿದ್ದಾರೆ. ನಾನು ರಾಯಚೂರು ಉಸ್ತುವಾರಿ ಸಚಿವ ಶಾಸಕರು ಕೇಳಿದ್ದಾರೆ. ಅದಕ್ಕೆ ಪತ್ರ ನೀಡಿದ್ದೇನೆ ಎಂದು ಶರಣಪ್ರಕಾಶ್ ಪಾಟೀಲ್ ತಿರುಗೇಟು ಕೊಟ್ಡಿದ್ದಾರೆ. ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವುದು ನನ್ನ ಕೆಲಸ ಎಂದು ತಿರುಗೇಟು ನೀಡಿದ ಶರಣಪ್ರಕಾಶ್ ಪಾಟೀಲ್ ಮಾತಿಗೆ ಶಾಸಕ ಬಸನಗೌಡ ದದ್ದಲ್ ಗೆ ಲೇಟರ್ ಕೊಟ್ಟಿದ್ದಕ್ಕೆ ಬೋಸರಾಜು ಗರಂ ಆಗಿದ್ದಾರೆ. ನನ್ನ ಕೇಳದೆ ಹೇಗೆ ಪತ್ರ ಕೊಟ್ರಿ ಅಂತ ಸಿಟ್ಟಾದ ಬೋಸರಾಜು, ಈ ವೇಳೆ ಮಾತಿಗೆ ಮಾತು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಗಲಾಟೆಯನ್ನು ಸ್ಥಳದಲ್ಲಿದ್ದ ಉಳಿದ ಶಾಸಕರೇ ತಣ್ಣಗೆ ಮಾಡಿದ್ದಾರೆ.ಪವರ್ ಶೇರಿಂಗ್ ನಂತ ಗೊಂದಲದ ಅಬ್ಬರದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಕಾಂಗ್ರೆಸ್ ನಲ್ಲಿ ಇದೀಗ ಸಚಿವರು ಶಾಸಕರ ನಡುವಿನ ಸಮರ ಮತ್ತಷ್ಟು ಗೊಂದಲ ಸೃಷ್ಟಿಸುವ ಸಾಧ್ಯತೆ ಇದೆ.