ಕೆರೆ ಅಭಿವೃದ್ಧಿಗೆ 60ಸಾವಿರ ಲಂಚ ಪಡೆಯುವಾದ ಆರ್‌ಎಫ್‌ಒ ಲೋಕಾಯುಕ್ತ ಬಲೆಗೆ
ಚಾಮರಾಜನಗರ:ಅರಣ್ಯ ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿಗೆ ಲಂಚಕ್ಕೆ ಬೇಡಿಕೆ ಇಟ್ಟು ಆರ್‌ಎಫ್‌ಒ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಹನೂರು ತಾಲೂಕಿನ ಕೌದಳ್ಳಿಯಲ್ಲಿ ನಡೆದಿದೆ. ಹಾಗಾದರೆ ಯಾವ ಕಾರಣಕ್ಕಾಗಿ ಎಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು
ಮಲೆ ಮಹದೇಶ್ವರ ವನ್ಯಜೀವಿಧಾಮದ ಕೌದಳ್ಳಿ ಆರ್‌ಎಫ್‌ಒ ಕಾಂತರಾಜ್ ಚೌಹಾಣ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ ರೋಡ್ ಅರಣ್ಯ ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿ ಮಾಡಲು ಗ್ರಾಮ ಪಂಚಾಯಿತಿ ಸದಸ್ಯ ಜೋಸೆಫ್ ಆಳ್ಬಗನ್‌ನಿಂದ 60,000 ರೂಪಾಯಿ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ ರೋಡ್ ಅರಣ್ಯ ಪ್ರದೇಶ ವ್ಯಾಪ್ತಿಯ ಮೊರನೂರು ಹುಣಸೆ ಮರ ಬಾವಿಯ ಹತ್ತಿರ 10,00,000 ರೂಪಾಯಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡಲು ಕ್ರೀಯಾ ಯೋಜನೆ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಆದರೆ, ವಲಯ ಅರಣ್ಯಾಧಿಕಾರಿ ಕಾಮಗಾರಿ ನಡೆಸಬೇಕಾದರೆ ತನಗೆ 80,000 ರೂಪಾಯಿ ಹಣ ನೀಡಬೇಕು. ಇಲ್ಲದಿದ್ರೆ, ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಲಂಚದ ಬೇಡಿಕೆಯಿಂದ ಬೇಸತ್ತ ಗ್ರಾಮ ಪಂಚಾಯಿತಿ ಸದಸ್ಯ ಜೋಸೆಫ್ ಆಳ್ಬಗನ್ ಚಾಮರಾಜನಗರ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ದೂರು ನೀಡುವ ವೇಳೆ ಈಗಾಗಲೇ ವಲಯ ಅರಣ್ಯಾಧಿಕಾರಿಗೆ ಮುಂಗಡ ಹಣವಾಗಿ 20,000 ರೂಪಾಯಿ ಮೇಲಿರುವುದಾಗಿಯೂ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಉಳಿಕೆ 60,000 ರೂಪಾಯಿ ಹಣ ಸ್ವೀಕರಿಸುವುದಾಗ ದಾಳಿ ನಡೆಸಿ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.