ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಮತ್ತೆ ಅಕ್ರಮ; ಗಾಂಜಾಗಾಗಿ ಜೈಲು ಸಿಬ್ಬಂದಿ ಹಾಗೂ ವಿಚಾರಣಾಧೀನ ಖೈದಿ ಮಧ್ಯೆ ಗಲಾಟೆ
ಅಪರಾಧಿಗಳನ್ನು ತಿದ್ದಿ ಜೀವನ ಸುಧಾರಣೆ ಪಾಠ ಮಾಡಬೇಕಿದ್ದ ಜೈಲುಗಳು ಐಶಾರಾಮಿ ಹೋಟೆಲ್ಗಳಂತೆ ಸರ್ವಿಸ್ ನೀಡುತ್ತಿವೆ. ಹಣವೊಂದಿದ್ದರೆ ಸಾಕು ಎಂತಹ ದೊಡ್ಡ ಅಪರಾಧಿಯಾದರೂ ಅವರಿಗೆ ಸೆಂಟ್ರಲ್ ಜೈಲುಗಳಲ್ಲಿ ಉತ್ತಮ ಸರ್ವಿಸ್ ಸಿಗುತ್ತೆ. ಈ ಅಕ್ರಮದ ಬಗ್ಗೆ ಈಗಾಗಲೇ ಟಿವಿ9 ಎಳೆ ಎಳೆಯಾಗಿ ವರದಿ ಮಾಡಿದೆ. ಆದರೂ ಈ ಜೈಲಿನಲ್ಲಿ ಇನ್ನೂ ಈ ಅಕ್ರಮಕ್ಕೆ ಕಡಿವಾಣ ಹಾಕಲಾಗಿಲ್ಲ. ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಮತ್ತೆ ಗಾಂಜಾ ಪತ್ತೆಯಾಗಿದೆ. ಗಾಂಜಾಗಾಗಿ ಜೈಲು ಸಿಬ್ಬಂದಿ ಹಾಗೂ ವಿಚಾರಣಾಧೀನ ಖೈದಿ ಮಧ್ಯೆ ಗಲಾಟೆ ನಡೆದಿದೆ.
ಅಪರಿಚಿತ ವ್ಯಕ್ತಿಗಳು ಕಲಬುರಗಿ ಸೆಂಟ್ರಲ್ ಜೈಲಿನ ಒಳಗೆ ಎರಡು ಗಾಂಜಾ ಪ್ಯಾಕೆಟ್ಗಳನ್ನು ಎಸೆದಿದ್ದರು. ಜೈಲೊಳಗೆ ಬಿದ್ದ ಗಾಂಜಾ ವಶಪಡಿಸಿಕೊಳ್ಳುವಾಗ ವಿಚಾರಣಾಧೀನ ಖೈದಿ ಶಾಹೀದ್ ಖುರೇಷಿ ಜೈಲು ಸಿಬ್ಬಂದಿಯ ಜೊತೆ ಗಲಾಟೆ ಮಾಡಿದ್ದಾನೆ. ಗಾಂಜಾ ನನಗೆ ಬೇಕು ಕೊಡಿ ಎಂದು ಜಗಳವಾಡಿದ್ದಾನೆ. ಇನ್ನು ಪ್ಯಾಕೆಟ್ ತೆಗೆದು ನೋಡಿದಾಗ ಅದರಲ್ಲಿ 150 ಗ್ರಾಂ ಗಾಂಜಾ ಹಾಗೂ ಎರಡು ಮೊಬೈಲ್ ಪತ್ತೆಯಾಗಿದೆ. ಘಟನೆ ಸಂಬಂಧ ಫರತಹಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬಿಗಿ ಭದ್ರತೆಯಿದ್ದರೂ ಜೈಲೊಳಗೆ ಗಾಂಜಾ ಬಂದಿದ್ದು ಹೇಗೆ?
ಜೈಲುಗಳಲ್ಲಿ ಅಕ್ರಮ ಹಿನ್ನೆಲೆ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಆದರೆ ಭದ್ರತೆ ಇದ್ದರೂ ಜೈಲಿನೊಳಗೆ ಗಾಂಜಾ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಗಳು ಜೈಲಿನೊಳಗೆ ಗಾಂಜಾ ಎಸೆದು ಹೋಗಿದ್ದಾರೆ ಎಂದು ಜೈಲು ಅಧಿಕಾರಿಗಳು ಕಥೆ ಕಟ್ಟಿದ್ದಾರೆ. ಹಾಗಾದ್ರೆ ಜೈಲು ಭದ್ರತೆಗಿದ್ದ ಕೆಎಸ್ಐಎಸ್ಎಫ್ ಅಧಿಕಾರಿಗಳು ಏನು ಮಾಡ್ತಿದ್ದರು? ಓರ್ವ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಇರುವ ಭದ್ರತಾ ಪಡೆ, ಜೈಲು ಸುತ್ತ ಕಣ್ಗಾವಲಿರೋ ಪಡೆ ಏನು ಕೆಲಸ ಮಾಡುತ್ತಿದೆ? ಎಂಬ ಪ್ರಶ್ನೆ ಎದ್ದಿದೆ.
ಕಳೆದ ತಿಂಗಳು ಕಲಬುರಗಿ ಸೆಂಟ್ರಲ್ ಜೈಲಿನ ರಾಜಾತೀಥ್ಯದ ಬಗ್ಗೆ ಟಿವಿ9 ವಿಸ್ತೃತ ವರದಿ ಮಾಡಿತ್ತು. ಈ ವೇಳೆ ಕೆಎಸ್ಐಎಸ್ಎಫ್ ಇನ್ಸ್ಪೆಕ್ಟರ್ ವಿರುದ್ದ ಅಲ್ಲಿನ ಸಿಬ್ಬಂದಿ ದೂರಿದ್ದರು. ಅವರೇ ಲಂಚ ತೆಗೆದುಕೊಂದು ನಿಷೇಧಿತ ವಸ್ತು ಸರಬರಾಜು ಮಾಡ್ತಾರೆ ಅಂತ ಸಿಬ್ಬಂದಿ ಪತ್ರ ಬರೆದಿದ್ದರು. ಈ ವಿಚಾರವನ್ನು ಟಿವಿ9 ಕನ್ನಡ ಸಾಕ್ಷಿ ಸಮೇತ ವರದಿ ಮಾಡಿತ್ತು. ಆದರೂ ತನಿಖೆ ಮಾಡ್ತಿದ್ದೀವಿ ಅಂತ ಇಲಾಖೆ ಜಾರಿಕೊಂಡಿತ್ತು. ಇದೀಗ ಗಾಂಜಾಗಾಗಿ ಗಲಾಟೆಯಂತ ಗಂಭೀರ ಪ್ರಕರಣ ನಡೆದರೂ ಇಲಾಖೆ ಕಣ್ಮುಚ್ಚಿ ಕುಳಿತಿದೆ. ದೂರು ಪಡೆದು ಸುಮ್ಮನಾಗಿದೆ. ಯಾರನ್ನು ರಕ್ಷಿಸಲು ಈ ನಿರ್ಲಕ್ಷ್ಯ? ಭದ್ರತಾ ಲೋಪದಂತಹ ಗಂಭೀರ ಪ್ರಕರಣ ನಡೆದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ.