ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಾನೇ ಸಿ.ಪಿ ಯೋಗೇಶ್ವರ್

ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆಲ್ಲಿ ನೂರಕ್ಕೆ ನೂರರಷ್ಟು ಎನ್‍ಡಿಎ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ. ಇನ್ನೊಂದು ಎರಡು ದಿನದಲ್ಲಿ ಮೈತ್ರಿ ಅಭ್ಯರ್ಥಿಯ ಹೆಸರು ಘೋಷಣೆಯಾಗಲಿದ್ದು, ನಾಮಮತ್ರ ಸಲ್ಲಿಸುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಘೋಷಿಸಿದರು.
ತಾಲೂಕಿನ ಕೂಡ್ಲೂರು ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್‍ನಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿ ಆಯ್ಕೆ ಕುರಿತಂತೆ ಕಾರ್ಯಕರ್ತರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ಚನ್ನಪಟ್ಟಣದ ಎನ್‍ಡಿಎ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದರು.
ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ಹೆಸರು ಘೋಷಣೆ: ಚನ್ನಪಟ್ಟಣ ಎನ್‍ಡಿಎ ಅಭ್ಯರ್ಥಿ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಬಿಜೆಪಿ ವರಿಷ್ಠರು ಮಾತನಾಡಲಾಗಿದ್ದಾರೆ. ನಾಳೆ ಅಥವಾ ನಾಡಿದ್ದು ಅಭ್ಯರ್ಥಿ ಹೆಸರು ಘೋಷಣೆ ಆಗಲಿದೆ. ನನಗಿರುವ ಮಾಹಿತಿಯ ಪ್ರಕಾರ ಎರಡು ಪಕ್ಷದವರು ಸೇರಿ ನನ್ನ ಹೆಸರು ಘೋಷಣೆ ಮಾಡಲಿದ್ದಾರೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.
ರಾಜ್ಯದಲ್ಲಿ ಮೈತ್ರಿ ಗಟ್ಟಿಯಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಹಾಲು-ಸಕ್ಕರೆಯಂತೆ ಬೆರೆತಿದ್ದೇವೆ. ರಾಜ್ಯದ ಜನರ ಹಿತದೃಷ್ಟಿಯಿಂದ ಮೈತ್ರಿ ಮುಂದುವರೆಯಲಿದೆ ಎಂದು ತಿಳಿಸಿದರು.
ಹೈವೋಲ್ಟೇಜ್ ಕ್ಷೇತ್ರವಲ್ಲ: ಚನ್ನಪಟ್ಟಣ ಕ್ಷೇತ್ರವನ್ನು ಹೈವೋಲ್ಟೇಜ್ ಕ್ಷೇತ್ರ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಇದು ಯಾವುದೇ ಹೈವೋಲ್ಟೇಜ್ ಕ್ಷೇತ್ರವಲ್ಲ. ಇಲ್ಲಿ ಯಾವುದೇ ಸ್ಪರ್ಧೆ ಇಲ್ಲ. ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಅವರದ್ದೇ ಆದ ಜವಾಬ್ದಾರಿಗಳಿವೆ. ಅವರು ಯಾವುದೇ ಕಾರಣಕ್ಕೂ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಚನ್ನಪಟ್ಟಣ ಉಪಚುನಾವಣೆ ಕಡಿಮೆ ಅವಧಿಯಲ್ಲಿ ಟ್ವೆಂಟಿಟ್ವೆಂಟಿ ಮ್ಯಾಚ್‍ನಂತೆ ಮುಗಿದು ಹೋಗುತ್ತದೆ ಎಂದರು.
ಎಚ್‍ಡಿಕೆ-ಡಿಕೆಶಿಗೆ ಸಿಎಂ ಆಗಬೇಕು: ನಾನೇ ಚನ್ನಪಟ್ಟಣ ಅಭ್ಯರ್ಥಿ ಎಂದು ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಹೇಳುತ್ತಿದ್ದಾರೆ. ಆದರೆ, ಇಬ್ಬರೂ ಅಭ್ಯರ್ಥಿಯಾಗುವುದಿಲ್ಲ. ನಾನೇ ಮೈತ್ರಿ ಅಭ್ಯರ್ಥಿಯಾದರೂ ಕುಮಾರಸ್ವಾಮಿ ಅವರೇ ಅಭ್ಯರ್ಥಿ ಎಂದು ಕೊಂಡು ಪ್ರಚಾರಮಾಡುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಬಳಿಕ ಲಕ್ಷಾಂತರ ಬಿಜೆಪಿ ಕಾರ್ಯಕರ್ತರ ಶ್ರಮದ ಪ್ರತಿಫಲವನ್ನು ಕೇಂದ್ರದಲ್ಲಿ ಸಚಿವರಾಗಿ ಕುಮಾರಸ್ವಾಮಿ ಅನುಭವಿಸುತ್ತಿದ್ದಾರೆ. ಎರಡು ಸೀಟ್ ಗೆದ್ದು ಅವರು ಕೇಂದ್ರ ಸಚಿವರಾಗಿದ್ದಾರೆ. ಈಗಾಗಲೇ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು, ಮೂರನೇ ಬಾರಿಯೂ ಸಿಎಂ ಆಗುವುದಾಗಿ ಅವರೇ ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಕೇಂದ್ರ ಕೈಗಾರಿಕೆ ಸಚಿವರಾಗಿ ಅವರದ್ದೇ ಆದ ಜವಾಬ್ದಾರಿಗಳಿವೆ. ಈ ಚುನಾವಣೆಯ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಗಂಭೀರವಾಗಿ ಪರಿಗಣಿಸುವುದಿಲ್ಲ: ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಜೀವನ ಪ್ರಾರಂಭವಾದಾಗ ಚನ್ನಪಟ್ಟಣದ ಒಂದು ಭಾಗ ಅವರ ಕ್ಷೇತ್ರಕ್ಕೆ ಸೇರಿತ್ತು. ಆಗ ಅವರಿಗೆ ಅಭಿವೃದ್ಧಿ ಮಾಡಲು ಆಗಿರಲಿಲ್ಲ. ಇದೀಗ ಉಪಮುಖ್ಯಮಂತ್ರಿ ಹುದ್ದೆ ಸಿಕ್ಕಿದೆ ಈಗ ಸಿಕ್ಕಿರುವ ಅವಕಾಶವನ್ನು ಉಪಯೋಗಿಸಿಕೊಂಡು ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ಮಾಡಲು ಓಡಾಡುತ್ತಿದ್ದಾರೆ. ನನ್ನ ಅವಧಿಯಲ್ಲಿ ಕುಮಾರಸ್ವಾಮಿ ಅವರ ಅವಧಿಯಲ್ಲಿ ಜಾರಿಯಾಗಿರುವ ಯೋಜನೆಗಳನ್ನು ಸೇರಿಸಿಕೊಂಡು ಪೂಜೆ ಮಾಡಿಸುತ್ತಿದ್ದು, ನಾನೂ ಇದ್ದೇನೆ ಎಂದು ತೋರಿಸಲು ಬರುತ್ತಿದ್ದಾರೆ.
ಡಿಸಿಎಂ ಆಗಿರುವ ಅವರು ಮುಖ್ಯಮಂತ್ರಿಯಾಗಲು ಸಿಎಂ ಸಿದ್ದರಾಮಯ್ಯ ಅವರ ಹಿಂದೆ ನಿಂತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‍ನ 135 ಶಾಸಕರು ಇದ್ದಾರೆ. ಅವರಿಗೆ ಚನ್ನಪಟ್ಟಣ ಏಕೆ ಬೇಕು. ಅವರು ಈ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.
ಟಿಕೆಟ್ ಕೈತಪ್ಪುವುದು ಹೊಸದಲ್ಲ: ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುವುದು ನನಗೆ ಹೊಸದಲ್ಲ. ಟ್ರೈನ್ ಟಿಕೆಟ್ ಮಿಸ್ ಆಗುವ ರೀತಿಯಲ್ಲಿ ನನಗೆ ಟಿಕೆಟ್ ಕೈತಪ್ಪುತ್ತೆ. 1999ರಲ್ಲಿ ನಾನು ರಾಜಕೀಯಕ್ಕೆ ಪ್ರವೇಶಿಸಿದ ಮೊದಲ ಬಾರಿಯೇ ಟಿಕೆಟ್ ಕೈತಪ್ಪಿತ್ತು. ಅಂದು ಕಾಂಗ್ರೆಸ್ ಪಕ್ಷದ ಬಿಪಾರಂ ಅನ್ನು ಡಿ.ಕೆ.ಶಿವಕುಮಾರ್ ಹರಿದು ಹಾಕಿ ನನಗೆ ಟಿಕೆಟ್ ತಪ್ಪಿಸಿದರು. ಆದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಾನು ಆನಂತರ ಕಾಂಗ್ರೆಸ್ ಸೇರಿದೆ.
ಜನ ಕೈಹಿಡಿದಿದ್ದಾರೆ: ಆನಂತರ ಎರಡು ಬಾರಿ ಕಾಂಗ್ರೆಸ್‍ನಿಂದ ಜಯಗಳಿಸಿದೆ. ಕ್ಷೇತ್ರದ ಜನತೆ ಬರದಿಂದ ಅನುಭಿಸುತ್ತಿರುವ ನೋವನ್ನು ಸಹಿಸಲಾಗದೆ ಬಿಜೆಪಿಗೆ ಸೇರ್ಪಡೆಗೊಂಡೆ. ನೀರಾವರಿ ಯೋಜನೆಗಾಗಿ ಪಕ್ಷಾಂತರ ಮಾಡಿದೆ. ಈಬಾರಿಯ ಚುನಾವಣೆಯಲ್ಲಿ ಜೆಡಿಎಸ್‍ನ ಕೆಲ ಮುಖಂಡರು ನನಗೆ ಟಿಕೆಟ್ ನೀಡುವಂತೆ ಕುಮಾರಸ್ವಾಮಿ ಅವರಿಗೂ ಹೇಳಿದ್ದಾರೆ. ಕಾಂಗ್ರೆಸ್‍ನ ಕೆಲವರು ಮಾತನಾಡಿ ನನಗೆ ಬೆಂಬಲ ಸೂಚಿಸುತ್ತಿದ್ದಾರೆ. ನಾನು ಮೊದಲ ಬಾರಿ ಪಕ್ಷೇತರವಾಗಿ ಸ್ಪರ್ಧೆಮಾಡಿದಾಗ ಕಾಣಿಸುತ್ತಿದ್ದ ಮುಖಗಳು ಇದೀಗ ಕಾಣಿಸುತ್ತಿವೆ. ಜನರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಎಂದರು.
ಬಿಜೆಪಿಯಿಂದ 4 ಬಾರಿ ಸೋತಿದ್ದೇನೆ: ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷವನ್ನು ಸಂಘಟನೆ ಮಾಡಬೇಕು ಎಂದು 15 ವರ್ಷಗಳಿಂದ ನಾನು ಶ್ರಮಿಸುತ್ತಿದ್ದೇನೆ. ಕಳೆದ 15 ವರ್ಷಗಳಲ್ಲಿ ನಾನು ಬಿಜೆಪಿಯಿಂದ 5 ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿದ್ದು, ನಾಲ್ಕರಲ್ಲಿ ಸೋಲು ಕಂಡಿದ್ದೇನೆ. ಕುಮಾರಸ್ವಾಮಿ ಅವರ ವಿರುದ್ಧ ಮೂರು ಚುನಾವಣೆಗಳಲ್ಲಿ ಸೋತಿದ್ದೇನೆ. ನಾಲ್ಕು ಬಾರಿಯೂ ನನ್ನ ವೈಯಕ್ತಿಕ ಕಾರಣಕ್ಕೆ ನಾನು ಸೋಲಲಿಲ್ಲ. ಬಿಜೆಪಿ ಇಲ್ಲಿ ಬಲಿಷ್ಠವಾಗಿ ಇಲ್ಲದ ಕಾರಣಕ್ಕೆ ಸೋತಿದ್ದೇನೆ. ನಾನು ಸೋತಿದ್ದರೂ ಹಳೇಮೈಸೂರು ಭಾಗದಲ್ಲಿ ಬಿಜೆಪಿ ಗಟ್ಟಿಗೊಳಿಸುವ ಕೆಲಸ ಮಾಡಿದ್ದೇನೆ. ಇಂದು ಬಿಜೆಪಿ ಬಲವಾಗಿದೆ. ಎರಡೂ ಪಕ್ಷಗಳ ಮೈತ್ರಿಗೆ ನನ್ನದೂ ಒಂದು ಅಳಿಲು ಸೇವೆ ಇದೆ ಎಂದರು.
ರಾಷ್ಟ್ರೀಯ ಪಕ್ಷಗಳು ಕೈಕೊಟ್ಟಾಗಲೆಲ್ಲಾ ಈ ಕ್ಷೇತ್ರದ ಜನತೆ ನನ್ನ ಜೊತೆಗೆ ಇದ್ದಾರೆ. ನಾನು ಜನತೆಯ ಒಳಿತಿಗಾಗಿ ರಾಜಕಾರಣ ಮಾಡುತ್ತಿದ್ದೇನೆ. ನಾನು ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ನಾನು ಸ್ಪರ್ಧಿಸಬೇಕು ಕ್ಷೇತ್ರದ ಜನ ಬಯಸಿದ್ದಾರೆ ಎಂದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್. ಆನಂದಸ್ವಾಮಿ, ನಗರಾಧ್ಯಕ್ಷ ಶಿವಕುಮಾರ್, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ಎಸ್. ಲಿಂಗೇಶ್ ಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜ್, ಕೆ.ಟಿ.ಜಯರಾಮು, ಬ್ಯಾಡರಹಳ್ಳಿ ರಾಮಚಂದ್ರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಪಿ. ರಾಜೇಶ್ . ಕೆ.ಟಿ. ಜಯರಾಮ್. ವಿ.ಬಿ.ಚಂದ್ರು, ಜಯಕುಮಾರ್ ಇತರರು ಇದ್ದರು.
ಮಾಡಿದ್ದ ಅಡುಗೆ ಮಣ್ಣು ಪಾಲು
ಸಭೆಗೆ ಬಂದಿದ್ದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮಾಡಿದ್ದ ಸುಮಾರು ಮೂರು ಸಾವಿರ ಜನಗಳಿಗೆ ಮಾಡಿದ್ದ ಅಡುಗೆ ಮಣ್ಣು ಪಾಲು.
ಶಿಶಿರ ರೆಸಾರ್ಟ್ ನಲ್ಲಿ ನಡೆದ ಸಭೆಗೆ ತಾಲೂಕಿನ ಹಲವೆಡೆ ಗ್ರಾಮೀಣ ಪ್ರದೇಶದಿಂದ ಬಂದಿದ್ದ ಕಾರ್ಯಕರ್ತರು ಗಳಿಗಾಗಿ ಮಾಂಸಾಹಾರಿ ಊಟದ ವ್ಯವಸ್ಥೆ ಮಾಡಲಾಗಿತ್ತು ಸಭೆ ಮುಗಿಯುವಷ್ಟರಲ್ಲಿ ಸ್ಥಳಕ್ಕೆ ಬಂದ ಚುನಾವಣಾ ಅಧಿಕಾರಿಗಳು ರಾಮನಗರ ಉಪ ವಿಭಾಗಧಿಕಾರಿ ಸೇರಿದಂತೆ ಪೋಲಿಸ್ ಅಧಿಕಾರಿಗಳ ತಂಡ ಮಾಡಿದ್ದ ಅಡುಗೆಯನ್ನು ಬಡಿಸದಂತೆ ಮುಟ್ಟುಗೋಲು ಹಾಕಿಕೊಂಡು ನಂತರ ಅದನ್ನು ಅಲ್ಲೆ ಪಕ್ಕದಲ್ಲಿ ಗುಂಡಿ ತೆಗೆದು ಮುಚ್ಚಲಾಯಿತು ಇದರಿಂದ ಸಭೆಗೆ ಬಂದಿದ್ದ ಕಾರ್ಯಕರ್ತರುಗಳು ಊಟ ಇಲ್ಲದೆ ಅಧಿಕಾರಿಗಳಿಗೆ ಶಾಪ ಹಾಕಿಕೊಂಡು ತೆರಳಿದರು.