ಉಜ್ಬೇಕಿಸ್ತಾನಕ್ಕೆ ಬಂದಿಳಿದ ಭಾರತ ಪ್ರಧಾನಿ ಮೋದಿ
ಸಮರ್ಕಂಡ್: ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉಜ್ಬೇಕಿಸ್ತಾನದ ಐತಿಹಾಸಿಕ ಸಮರ್ಕಂಡ್ ನಗರಕ್ಕೆ ಬಂದಿಳಿದಿದ್ದಾರೆ.
ಎಸ್‌ಸಿಒ ಶೃಂಗಸಭೆಯಲ್ಲಿ ಪ್ರಾದೇಶಿಕ ಭದ್ರತಾ ಸವಾಲುಗಳು, ವ್ಯಾಪಾರ ವೃದ್ಧಿ ಮತ್ತು ಇಂಧನ ಪೂರೈಕೆಗೆ ಉತ್ತೇಜನ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಎರಡು ವರ್ಷಗಳ ನಂತರ ಉಜ್ಬೇಕಿಸ್ತಾನದ ಸಮರ್ಕಂಡ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹ ಭಾಗವಹಿಸಲಿದ್ದಾರೆ.
ಉಜ್ಬೇಕಿಸ್ತಾನಕ್ಕೆ ತಮ್ಮ ಭೇಟಿ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ನಾನು ಸಮರ್ಕಂಡ್ ತಲುಪಿದ್ದೇನೆ ಎಂದು ಹೇಳಿದ್ದಾರೆ.
ಸಮರ್ಕಂಡ್ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಉಜ್ಬೇಕಿಸ್ತಾನದ ಪ್ರಧಾನ ಮಂತ್ರಿ ಅಬ್ದುಲ್ಲಾ ಅರಿಪೋವ್, ಸಚಿವರು, ಸಮರ್ಕಂಡ್ ಗವರ್ನರ್ ಮತ್ತು ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.
ಪ್ರಧಾನಿ ತಮ್ಮ ಭೇಟಿ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಜ್ಬೇಕಿಸ್ತಾನದ ಅಧ್ಯಕ್ಷ ಶಾವ್ಕತ್ ಮಿರ್ಜಿಯೋಯೆವ್ ಅವರೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ.
ಎಸ್‌ಸಿಒ ಶೃಂಗಸಭೆಯಲ್ಲಿ ಸಮಕಾಲೀನ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳು, ಎಸ್‌ಸಿಒ ವಿಸ್ತರಣೆ, ಬಹುಪಕ್ಷೀಯ ಸಹಕಾರ ವೃದ್ಧಿಸಿಕೊಳ್ಳಲು ಅಭಿಪ್ರಾಯ ಹಂಚಿಕೊಳ್ಳುವುದನ್ನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಉಜ್ಬೇಕಿಸ್ತಾನದ ಅಧ್ಯಕ್ಷರೊಂದಿಗೆ ವ್ಯಾಪಾರ, ಆರ್ಥಿಕತೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ಸಂಬಂಧಿಸಿದಂತೆ ಮಹತ್ವದ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಪ್ರಕಟಣೆ ಲಭ್ಯವಾಗಿಲ್ಲ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಹ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.