ಅಯೋಧ್ಯೆಯ ಶ್ರೀಮಂತ ಪರಂಪರೆ ಸಂರಕ್ಷಿಸಲು ಬದ್ಧರಾಗಿದ್ದೇವೆ: ಪ್ರಧಾನಿ ಮೋದಿ
ನವದೆಹಲಿ, ಡಿಸೆಂಬರ್ 30: ಅಯೋಧ್ಯೆಯಲ್ಲಿ ಒಟ್ಟು 15,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹೂಡಿಕೆಯ ಹಲವು ಯೋಜನೆಗಳನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ನಗರದಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ನಿರ್ಮಿಸಲು ತಮ್ಮ ಸರ್ಕಾರ ತೀರ್ಮಾನಿಸಿದ್ದು, ಆ ವಿಚಾರದಲ್ಲಿ ಬದ್ಧವಾಗಿದೆ ಎಂದು ಅಯೋಧ್ಯೆ ಭೇಟಿಗೂ ಮುನ್ನ ಮೋದಿ ತಿಳಿಸಿದ್ದಾರೆ.
‘ನಮ್ಮ ಸರ್ಕಾರವು ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ಸಂಪರ್ಕವನ್ನು ಸುಧಾರಿಸಲು ಮತ್ತು ಭಗವಾನ್ ಶ್ರೀರಾಮನ ನಗರವಾದ ಅಯೋಧ್ಯೆಯ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ನಿರ್ಧರಿಸಿದ್ದು ಅದಕ್ಕೆ ಬದ್ಧವಾಗಿದೆ. ಈ ದಿಸೆಯಲ್ಲಿ ನೂತನವಾಗಿ ನಿರ್ಮಿಸಿರುವ ವಿಮಾನ ನಿಲ್ದಾಣ ಹಾಗೂ ಮರು ಅಭಿವೃದ್ಧಿ ಪಡಿಸಿದ ರೈಲು ನಿಲ್ದಾಣವನ್ನು ನಾಳೆ ಉದ್ಘಾಟಿಸಲಿದ್ದೇನೆ. ಇದರೊಂದಿಗೆ ಇನ್ನೂ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುವ ಭಾಗ್ಯ ನನ್ನದಾಗಿದೆ. ಇದು ಅಯೋಧ್ಯೆ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿರುವ ನನ್ನ ಕುಟುಂಬ ಸದಸ್ಯರ ಜೀವನವನ್ನು ಸುಲಭಗೊಳಿಸಲಿದೆ’ ಎಂದು ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಉಲ್ಲೇಖಿಸಿದ್ದಾರೆ.ನವೀಕರಿಸಿದ ಅಯೋಧ್ಯೆ ರೈಲು ನಿಲ್ದಾಣವನ್ನು ಬೆಳಗ್ಗೆ 11:15ಕ್ಕೆ ಪ್ರಧಾನಿ ಮೋದಿಯವರು ಉದ್ಘಾಟಿಸುತ್ತಿದ್ದಾರೆ. ಹೊಸ ಅಮೃತ್ ಭಾರತ್ ಮತ್ತು ವಂದೇ ಭಾರತ್ ರೈಲುಗಳಿಗೂ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ. ಇದರಲ್ಲಿ ಕರ್ನಾಟಕದ 2 ವಂದೇ ಭಾರತ್ ರೈಲುಗಳೂ (ಮಂಗಳೂರು-ಮಡಗಾವ್, ಕೊಯಮತ್ತೂರು-ಬೆಂಗಳೂರು ವಂದೇ ಭಾರತ್ ರೈಲು) ಸೇರಿರಲಿವೆ. ಮಧ್ಯಾಹ್ನ 12:15ಕ್ಕೆ ನೂತನವಾಗಿ ನಿರ್ಮಿಸಿರುವ ಅಯೋಧ್ಯೆ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ.