ಇತ್ತೀಚಿನ ಸುದ್ದಿರಾಜ್ಯ

ಅಪಾಯದಲ್ಲಿ ಹೇಮಾವತಿ ನದಿ ಸೇತುವೆ, ಮಳೆಗಾಲಕ್ಕೂ ಮುನ್ನವೇ ಆತಂಕ

ಅದು ನಿತ್ಯ ಹತ್ತಾರು ಸಾವಿರ ವಾಹನಗಳು ಓಡಾಡುವ ಸೇತುವೆ. ಜೀವನದಿ ಹೇಮಾವತಿ ನದಿಗೆ ನಿರ್ಮಿಸಿರುವ ಸೇತುವೆ. ನಿರ್ಮಾಣವಾಗಿ 50 ವರ್ಷ ಕಳೆದಿದ್ದು, ಇದೀಗ ಸಮರ್ಪಕ ನಿರ್ವಾಹಣೆ ಇಲ್ಲದೆ ಕುಸಿದು ಬೀಳುವ ಸ್ಥಿತಿಗೆ ತಲುಪಿದೆ. ಮರಳುಗಣಿಗಾರಿಕೆಯಿಂದ ಸೇತುವೆಯ ಪಿಲ್ಲರ್​ಗಳು ಕುಸಿದು ಬೀಳುವಂತಾಗಿದೆ. ಬೈಪಾಸ್ ರಸ್ತೆ ನಿರ್ಮಾಣವಾದ ಬಳಿಕ ಹೆದ್ದಾರಿ ಪ್ರಾಧಿಕಾರ ಈ ಸೇತುವೆಯ ಉಸ್ತುವಾರಿಯನ್ನೇ ಕೈಬಿಟ್ಟಿದೆ.

ಹಾಸನ ಜಿಲ್ಲೆಯ ಸಕಲೇಶಪುರ ಭಾಗದ ಜೀವನದಿ ಹೇಮಾವತಿಗೆ ಅಡ್ಡಲಾಗಿ 50 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸೇತುವೆ ಈಗ ಕುಸಿದುಬೀಳುವ ಹಂತಕ್ಕೆ ತಲುಪಿದೆ. ರಾಷ್ಟ್ರೀಯ ಹೆದ್ದಾರಿಯ ಸೇತುವೆ ಅಪಾಯದ ಸ್ಥಿತಿ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಕೆಲವು ತಿಂಗಳ ಹಿಂದಿನವರೆಗೂ ಇದೇ ಸೇತುವೆ ಮೇಲೆ ನಿತ್ಯವೂ 25 ಸಾವಿರಕ್ಕೂ ಅಧಿಕ ಸಂಖ್ಯೆಯ ವಾಹನಗಳು ಓಡಾಡುತ್ತಿದ್ದವು. ನೂರಾರು ಟನ್ ಭಾರದ ಸರಕು ಹೊತ್ತ ವಾಹನಗಳಿಗೂ ಇದೇ ಸೇತುವೆ ಆಸರೆಯಾಗಿತ್ತು. ಆದರೆ, ಬರೊಬ್ಬರಿ 23 ವರ್ಷಗಳ ಹಿಂದೆ ಒಂದಷ್ಟು ದುರಸ್ತಿ ಕಂಡಿದ್ದ ಈ ಸೇತುವೆಯನ್ನು ಆ ನಂತರ ದುರಸ್ತಿ ಮಾಡದಿರುವುದು ಆತಂಕ ಸೃಷ್ಟಿಮಾಡಿದೆ.ಸೇತುವೆ ನಿರ್ಮಿಸುವಾಗ ಭೂಮಿ ಆಳದಲ್ಲಿ ಬಗೆದು ನಿರ್ಮಿಸಿದ್ದ ಪಿಲ್ಲರ್​​ನ ತಳಪಾಯವೇ ಈಗ ಮೇಲೆ ಬಂದಿದೆ, ಸೇತುವೆಯ ಪಿಲ್ಲರ್​​ಗಳು ಬಿರುಕು ಬಿಟ್ಟು ಅಡಿಪಾಯದ ಕಲ್ಲುಗಳು ಉದುರಿ ಬೀಳುತ್ತಿವೆ. ಸೇತುವೆ ಮೇಲೆ ವಾಹನಗಳು ಸಂಚಾರ ಮಾಡಿದಾಗ ಸೇತುವೆ ಅದರುತ್ತಿದೆ. ಪ್ರತೀ ವರ್ಷದ ಮಳೆಗಾಲದಲ್ಲಿ ಹೇಮಾವತಿ ನದಿ ಉಕ್ಕಿ ಹರಿಯುತ್ತದೆ. ಈ ವರ್ಷದ ಮಳೆಗಾಲ ಆರಂಭಕ್ಕೂ ಮುನ್ನ ಸೇತುವೆ ದುರಸ್ಥಿ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಇದು ಸ್ಥಳೀಯರನ್ನು ಭಾರಿ ಆತಂಕಕ್ಕೀಡು ಮಾಡಿದೆ.ಸೇತುವೆಯ ಮೇಲ್ಛಾವಣಿ ಹಾಗೂ ಸೇತುವೆಯ ಪಿಲ್ಲರ್​ಗಳ ನಡುವೆ ಶಾಕ್ ಅಬ್ಸರ್ವ್ ಮಾದರಿಯ ಜಾಯಿಂಟ್​ಗಳಿದ್ದು ಸತತ 23 ವರ್ಷಗಳಿಂದ ನಿರ್ವಹಣೆ ಇಲ್ಲದೆ ಅವು ಮುರಿದು ಬಿದ್ದಿವೆ. 2003ರ ನಂತರ ಸೇತುವೆ ದುರಸ್ಥಿ ಬಗ್ಗೆ ಯಾವುದೇ ಕ್ರಮ ಆಗಿಲ್ಲ. ನಿರ್ವಹಣೆಯನ್ನೂ ಮಾಡಲಾಗಿಲ್ಲ. ಹಾಗಾಗಿಯೇ ಸೇತುವೆ ಅಪಾಯದ ಅಂಚಿಗೆ ಬಂದು ನಿಂತಿದೆ ಎನ್ನಲಾಗಿದೆ. ಇದಕ್ಕೂ ಹಿಂದೆ ಇದ್ದ ಕಬ್ಬಿಣದ ಸೇತುವೆ ದುರಸ್ಥಿ ಹಂತಕ್ಕೆ ಬಂದಾಗ ಸರಿಸುಮಾರು 50 ವರ್ಷಗಳ ಹಿಂದೆ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು.ಸದ್ಯ ಬೈಪಾಸ್ ರಸ್ತೆ ಸಂಚಾರಕ್ಕೆ ಮುಕ್ತವಾಗಿದ್ದು, ಕೆಲ ತಿಂಗಳ ಹಿಂದೆಯಷ್ಟೇ ಅಲ್ಲಿ ವಾಹನಗಳ ಓಡಾಟ ಶುರುವಾಗಿದೆ. ಇಷ್ಟಿದ್ದರೂ ಕೂಡ ಹಾಸನ ಸಕಲೇಶಪುರ, ಬೇಲೂರು ಸಕಲೇಶಪುರ ಮಾರ್ಗದ ಸಾವಿರಾರು ವಾಹನಗಳು ಹಾಗೂ ಸಕಲೇಶಪುರಕ್ಕೆ ಬರುವ ಸಹಸ್ರಾರು ಪ್ರವಾಸಿಗರು ಇದೇ ಸೇತುವೆ ಮೇಲೆ ಓಡಾಡಬೇಕು.ಈ ಪ್ರದೇಶದಲ್ಲಿ ದಶಕಗಳಿಂದ ನಡೆದ ಅವೈಜ್ಫಾನಿಕ ಮರಳು ಗಣಿಗಾರಿಕೆಯಿಂದ ನದಿ ಪಾತ್ರ ಬದಲಾಗಿದೆ. ನದಿಯು ಮತ್ತಷ್ಟು ಆಳವಾಗಿದ್ದು, ಪಿಲ್ಲರ್​​ಗಳು ಹೊರಗೆ ಚಾಚಿಕೊಂಡಿವೆ. ಇದರಿಂದ ಪಿಲ್ಲರ್​ಗಳು ಸಡಿಲಗೊಂಡು ಸೇತುವೆಯೇ ಶಿಥಿಲಗೊಂಡು ಕುಸಿಯುವ ಭಿತಿ ನಿರ್ಮಾಣವಾಗುತ್ತಿದೆ. ಬೈಪಾಸ್ ರಸ್ತೆಯಾದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಸೇತುವೆ ಉಸ್ತುವಾರಿಯನ್ನೇ ಕೈಬಿಟ್ಟಿದೆ ಎಂದು ಜನರು ಆರೋಪಿಸಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.ಒಟ್ಟಿನಲ್ಲಿ, ನಿತ್ಯ ಸಾವಿರಾರು ವಾಹನಗಳು ಓಡಾಡುವ ಸೇತುವೆ ಶಿಥಿಲಗೊಂಡು ಅಪಾಯದ ಸೂಚನೆ ನೀಡುತ್ತಿದೆ. ಮಳೆಗಾಲದಲ್ಲಿ ಭೋರ್ಗಗರೆದು ಹರಿಯುವ ಹೇಮಾವತಿ ನದಿಯಿಂದ ಸೇತುವೆಗೆ ಅಪಾಯ ಆಗುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ.

Related Articles

Leave a Reply

Your email address will not be published. Required fields are marked *

Back to top button